ಮಡಿಕೇರಿ, ಫೆ. ೨೨: ಗ್ರಾಮದ ರಕ್ಷಕ, ಐತಿಹಾಸಿಕ ಹಿನ್ನಲೆಯುಳ್ಳ ಶ್ರೀ ಶಾಸ್ತ-ಈಶ್ವರ ದೇವರ ೨ನೇ ವಾರ್ಷಿಕೋತ್ಸವ ಹಾಗೂ ವಿಷ್ಣುಮೂರ್ತಿ ಕೋಲ ಶ್ರದ್ಧಾಭಕ್ತಿಯಿಂದ ಸಂಪನ್ನಗೊAಡಿತು.

ದೇವಸ್ಥಾನದ ಅರ್ಚಕರಾದ ಹರಿಪ್ರಸಾದ್ ಅವರ ಮುಂದಾಳತ್ವದಲ್ಲಿ ಸೂರ್ಯ ತಂತ್ರಿಯ ಮಾರ್ಗದರ್ಶನದಲ್ಲಿ ತಾ. ೧೭ ರಂದು ಪ್ರಾತಃಕಾಲ ಗಣಪತಿ ಹೋಮ, ಸಹಸ್ರನಾಮ ಅರ್ಚನೆ, ಬೇಟೆ ಅಯ್ಯಪ್ಪ ಸನ್ನಿಧಿ ಹಾಗೂ ವಿಷ್ಣುಮೂರ್ತಿ ಸನ್ನಿಧಿಯಲ್ಲಿ ಅಭಿಷೇಕ ಪೂಜೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗದೊಂದಿಗೆ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಂಜೆ ೬ ಗಂಟೆಗೆ ಕಾವೇರಿ ಹೊಳೆಯಲ್ಲಿ ಬಾಗಿನ ಅರ್ಪಿಸಿ, ಶ್ರೀ ಶಾಸ್ತ-ಈಶ್ವರ ದೇವರ ಪ್ರತಿಬಿಂಬದ ಅವಭೃತ ಸ್ನಾನದ ಬಳಿಕ ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ಆಗಮಿಸಿ, ವಿವಿಧ ನೃತ್ಯ ಬಲಿಯ ನರ್ತನ ನೆರೆದಿದ್ದ ಸಹಸ್ರ ಸಂಖ್ಯೆಯ ಭಕ್ತಾದಿಗಳ ಮನ ತಣಿಸಿತು. ತಾ. ೧೮ ರಂದು ಬೆಳಿಗ್ಗೆ ೮ ಗಂಟೆಗೆ ವಿಷ್ಣುಮೂರ್ತಿ ದೈವದ ಕೋಲ ಜರುಗಿತು. ದೇವಸ್ಥಾನ ಸಮಿತಿ ಅಧ್ಯಕ್ಷ ಕೂಡಂಡ ರಾಜೇಂದ್ರ ಅಯ್ಯಮ್ಮ ಹಾಗೂ ಪದಾಧಿಕಾರಿಗಳು ಸೇರಿದಂತೆ ಹೊರ ನಾಡಿನ ಭಕ್ತಾದಿಗಳು ಪಾಲ್ಗೊಂಡಿದ್ದರು.