ಕರಿಕೆ, ಫೆ. ೨೨: ಸರಕಾರದ ಮಹತ್ವದ ಕಾರ್ಯಕ್ರಮದಲ್ಲಿ ಒಂದಾದ ಜಿಲ್ಲಾಧಿಕಾರಿಗಳ ನಡಿಗೆ ಹಳ್ಳಿಯ ಕಡೆಗೆ ಕಾರ್ಯಕ್ರಮದ ಪ್ರಯುಕ್ತ ತಹಶೀಲ್ದಾರರಿಂದ ಕರಿಕೆ ವಿಎಸ್ಎಸ್ಎನ್ ಸಭಾಂಗಣದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಯಿತು. ಮಡಿಕೇರಿ ತಹಶೀಲ್ದಾರ್ ಕಿರಣ್ ಗೌರಯ್ಯ ಅವರು ಗ್ರಾಮಸ್ಥರ ಅಹವಾಲನ್ನು ಆಲಿಸಿದರು. ಗ್ರಾಮದ ಪ್ರಮುಖ ಸಮಸ್ಯೆಗಳಾದ ಕುಡಿಯುವ ನೀರು, ರಸ್ತೆ, ಹಕ್ಕು ಪತ್ರ, ಆರ್ಟಿಸಿ, ಪಿಂಚಣಿ, ಬಸ್ ಸಮಸ್ಯೆ, ದೂರವಾಣಿ ಟವರ್ ಸೇರಿದಂತೆ ಹತ್ತು ಹಲವು ಸಮಸ್ಯೆಗಳನ್ನು ವಯೋವೃದ್ಧರು, ಮಹಿಳೆಯರು ತಹಶೀಲ್ದಾರರ ಗಮನಕ್ಕೆ ತಂದರು. ಈ ಬಗ್ಗೆ ಸರಕಾರದ ಮಟ್ಟದಲ್ಲಿ ಹಂತ ಹಂತವಾಗಿ ಪ್ರಾಮಾಣಿಕವಾಗಿ ಪರಿಹಾರ ಮಾಡುವುದಾಗಿ ತಹಶೀಲ್ದಾರರು ಭರವಸೆ ನೀಡಿದರು. ಈ ಸಂದರ್ಭ ಉಪ ತಹಶೀಲ್ದಾರ್ ದೊರೆ, ಶಿರಸ್ತೆದಾರ ಗುರುಪ್ರಸಾದ್, ಕಂದಾಯ ನಿರೀಕ್ಷಕ ಅನೂಪ್, ಕೃಷಿ ಅಧಿಕಾರಿ ಗಿರೀಶ್, ಕರಿಕೆ ಆರೋಗ್ಯ ಅಧಿಕಾರಿ ಡಾ. ಪುಂಡಲಿ ಕೃಷ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಲ್ಪನಾ ಜಗದೀಶ್, ಉಪಾಧ್ಯಕ್ಷ ಬಾಲಚಂದ್ರ ನಾಯರ್, ಅಭಿವೃದ್ಧಿ ಅಧಿಕಾರಿ ಗಣಪತಿ, ಅಕ್ರಮ ಸಕ್ರಮ ಸಮಿತಿ ಸದಸ್ಯೆ ಕವಿತಾ ಸೇರಿದಂತೆ ಪಂಚಾಯಿತಿ ಸದಸ್ಯರು, ವಿವಿಧ ಅಧಿಕಾರಿಗಳು, ಗ್ರಾಮಸ್ಥರು ಹಾಜರಿದ್ದರು.