ಮಡಿಕೇರಿ, ಫೆ. ೨೦: ಆನೆ-ಮಾನವ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ ಕಳೆದ ನವೆಂಬರ್‌ನಲ್ಲಿ ರಾಜ್ಯ ಸರಕಾರ ಘೋಷಿಸಿದ ಆನೆ ಕಾರ್ಯಪಡೆಯ ಸದಸ್ಯರಿಗೆ ಇದುವರೆಗೂ ಸಂಬಳ ನೀಡದೆ ಇರುವುದಾಗಿ ಅರಣ್ಯ ಇಲಾಖೆಯ ಅಧಿಕಾರಿ ಹಾಗೂ ಕಾರ್ಯಪಡೆಯ ಸದಸ್ಯರೋರ್ವರು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ. ಕೊಡಗು ಸೇರಿದಂತೆ ಚಿಕ್ಕಮಗಳೂರು, ಹಾಸನ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಆನೆ-ಮಾನವ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರವು ಕಾರ್ಯಪಡೆಯನ್ನು ಅಸ್ತಿತ್ವಕ್ಕೆ ತಂದಿತು. ಶಾಶ್ವತ ನೇಮಕಾತಿ ಮೇರೆಗೆ ಪ್ರತಿ ಜಿಲ್ಲೆಯಲ್ಲಿ ಪ್ರಬಾರ ಅರಣ್ಯ ಅಧಿಕಾರಿ, ವಲಯ ಅರಣ್ಯ ಅಧಿಕಾರಿ, ೪ ಪ್ರಬಾರ ವಲಯ ಅರಣ್ಯಾಧಿಕಾರಿಗಳು, ೮ ಅರಣ್ಯ ರಕ್ಷಕರನ್ನು ನೇಮಿಸಿ ಹೆಚ್ಚುವರಿಯಾಗಿ ಗುತ್ತಿಗೆ ಆಧಾರದಲ್ಲಿ ೩೬ ಅರಣ್ಯ ವೀಕ್ಷಕರನ್ನು ಕಳೆದ ನವೆಂಬರ್ ತಿಂಗಳಿನಲ್ಲಿ ನೇಮಿಸಿತು.

ಕೊಡಗಿನಲ್ಲಿ ನವೆಂಬರ್ ತಿಂಗಳಿನಲ್ಲಿಯೇ ಅಸ್ತಿತ್ವಕ್ಕೆ ಬಂದ ಕಾರ್ಯಪಡೆ ಇತ್ತೀಚೆಗೆ ದ. ಕೊಡಗಿನಲ್ಲಿ ಹುಲಿ ಸೆರೆ ಕಾರ್ಯಾ ಚರಣೆಯಲ್ಲಿ ಪಾಲ್ಗೊಂಡಿತ್ತು. ಟಿ.ನರಸೀಪುರದಲ್ಲಿ ಚಿರತೆ ಸೆರೆ ಕಾರ್ಯಾಚರಣೆಯಲ್ಲಿಯೂ ಕೊಡಗಿನ ತಂಡ ಕೈ ಜೋಡಿಸಿತ್ತು.

ಗುತ್ತಿಗೆ ಆಧಾರದಲ್ಲಿನ ಸಿಬ್ಬಂದಿಗೆ ಮಾತ್ರ ಸಂಬಳ ಪಾವತಿ ಯಾಗಿದ್ದು, ಕಾರ್ಯಪಡೆಯಲ್ಲಿನ ಅಧಿಕಾರಿಗಳಿಗೆ ಸಂಬಳ ದೊರೆತಿಲ್ಲ. ನವೆಂಬರ್ ೩೦ ರಿಂದಲೇ ಕಾರ್ಯಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೂ ಇನ್ನೂ ಕೂಡ ಸಂಬಳ ಪಾವತಿಯಾಗಿಲ್ಲ ಎಂಬುದಾಗಿ ಅಧಿಕಾರಿಯೋರ್ವರು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.