ಸೋಮವಾರಪೇಟೆ, ಫೆ. ೨೦: ಕೃಷಿಕರು ಕೃಷಿಕಾರ್ಯ ಕೈಗೊಂಡಿರುವ ಪ್ರದೇಶವನ್ನು ಸರ್ಕಾರ ಸಿ ಮತ್ತು ಡಿ ಜಾಗವೆಂದು ಪರಿಗಣಿಸಿ ಲ್ಯಾಂಡ್ ಬ್ಯಾಂಕ್ಗೆ ಹಸ್ತಾಂತರಿಸಿರುವುದರಿAದ ಸಾವಿರಾರು ರೈತರಿಗೆ ಸಮಸ್ಯೆ ಯಾಗುತ್ತಿದ್ದು, ಇದನ್ನು ತಕ್ಷಣ ಪರಿಹರಿಸಬೇಕು ಎಂದು ಕೂತಿ ಗ್ರಾಮಸ್ಥರು ಒತ್ತಾಯಿಸಿದರು.
ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದ ವತಿಯಿಂದ ತೋಳೂರುಶೆಟ್ಟಳ್ಳಿ ಗ್ರಾ.ಪಂ.ನ ಕೂತಿ ಗ್ರಾಮದ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಾರ್ವಜನಿಕರು, ಸಿ ಮತ್ತು ಡಿ ಜಾಗದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು.
ಗ್ರಾಮ ವಾಸ್ತವ್ಯದ ಅಧ್ಯಕ್ಷತೆಯನ್ನು ಜಿಲ್ಲಾ ಉಪ ವಿಭಾಗಾಧಿಕಾರಿ ಯತೀಶ್ ಉಲ್ಲಾಳ ವಹಿಸಿದ್ದರು. ಕೂತಿ ಗ್ರಾಮದ ೧೧೮೮ ಏಕರೆ ಪೈಕಿ ೧೦೦೦ ಎಕರೆಯನ್ನು ಸಿ ಮತ್ತು ಡಿ. ಜಾಗವನ್ನಾಗಿ ಪರಿವರ್ತಿಸಿ ಲ್ಯಾಂಡ್ ಬ್ಯಾಂಕ್ಗೆ ಹಸ್ತಾಂತರಿಸಲಾಗಿದೆ. ಇದರಿಂದಾಗಿ ಈ ಭಾಗದ ಕೃಷಿಕರ ಜಾಗದ ದಾಖಲೆಗಳು ಸಮರ್ಪಕವಾಗುತ್ತಿಲ್ಲ. ಇಂತಹ ಜಾಗದಲ್ಲಿ ಕೃಷಿ ಕೈಗೊಂಡು ಜೀವನ ನಡೆಸುತ್ತಿರುವ ಕೃಷಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಕ್ಷಣ ಸಿ ಮತ್ತು ಡಿ ಜಾಗ ಎಂಬುದನ್ನು ದಾಖಲೆಯಿಂದ ತೆರವುಗೊಳಿಸಬೇಕು ಎಂದು ಕೂತಿ ಗ್ರಾಮದ ಕಾರ್ಯದರ್ಶಿ ಬಿ.ಆರ್. ವಿನೋದ್ಕುಮಾರ್ ಸಭೆಯ ಗಮನ ಸೆಳೆದರು.
ಕೂತಿ ಸೇರಿದಂತೆ ಸುತ್ತಮುತ್ತಲ ಬಹುತೇಕ ಗ್ರಾಮದ ಜನರು ಕೃಷಿಯನ್ನೇ ಅವಲಂಬಿಸಿದ್ದು ಭತ್ತ ಮತ್ತು ಕಾಫಿ ಬೆಳೆದು ಜೀವನ ನಡೆಸುತ್ತಿದ್ದಾರೆ. ಅಕಾಲಿಕ ಮಳೆ, ಹವಾಮಾನ ವೈಪರೀತ್ಯದಿಂದ ಕೃಷಿ ಫಸಲು ನಷ್ಟವಾಗುತ್ತಿದೆ. ಕೃಷಿ ಸೇರಿದಂತೆ ಇನ್ನಿತರ ಸಾಲ ಪಡೆಯಲು ಆಸ್ತಿಯ ದಾಖಲೆಗಳು ಪೂರಕವಾಗಿಲ್ಲ. ಸಿ ಮತ್ತು ಡಿ ಎಂದು ನಮೂದಾಗಿರುವುದರಿಂದ ಸಾಲ ಸೌಲಭ್ಯ ಸಿಗುತ್ತಿಲ್ಲ. ಕೃಷಿಕರ ಹೆಸರಿಗೆ ದಾಖಲೆಯಾಗದ ಹೊರತು ಸಮಸ್ಯೆ ಪರಿಹಾರ ಆಗುವುದಿಲ್ಲ ಎಂದರು.
ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಉಪ ವಿಭಾಗಾಧಿಕಾರಿ ಯತೀಶ್ ಉಲ್ಲಾಳ್ ಹೇಳಿದರು.
ಗ್ರಾಮಸ್ಥ ದಿವಾಕರ್ ಮಾತನಾಡಿ, ಪ್ರಾಕೃತಿಕ ವಿಕೋಪಗಳಿಂದ ಬೆಳೆ ಹಾನಿ ಸಂಭವಿಸುವ ಸಂದರ್ಭ ಜಾಗದ ಸಮಸ್ಯೆಯಿಂದಾಗಿ ಪರಿಹಾರ ಪಡೆಯಲು ಸಾಧ್ಯವಾಗುತ್ತಿಲ್ಲ. ಇದರೊಂದಿಗೆ ಸಿ ಮತ್ತು ಡಿ ಜಾಗದ ಸಮಸ್ಯೆಯೂ ಇದೆ. ಗ್ರಾಮೀಣ ಭಾಗದಲ್ಲಿ ಮುಗಿಯದ ಸಮಸ್ಯೆಯಿಂದಾಗಿ ಯುವ ಜನಾಂಗ ಕೃಷಿ ಬಿಟ್ಟು ಬೆಂಗಳೂರಿಗೆ ತೆರಳುವಂತಾಗಿದೆ ಎಂದರು.
ಇದರೊAದಿಗೆ ಸೋಮವಾರಪೇಟೆ ತಾಲೂಕು ಕಚೇರಿಯಲ್ಲಿ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಸಾರ್ವಜನಿಕರ ಕೆಲಸ ಕಾರ್ಯಗಳಲ್ಲಿ ನಿರ್ಲಕ್ಷö್ಯ ವಹಿಸುತ್ತಿದ್ದಾರೆ. ಬಡವರನ್ನು ವೃಥಾ ಅಲೆದಾಡಿಸುತ್ತಿದ್ದಾರೆ. ೫೦ ಮತ್ತು ೫೩ರಡಿಯಲ್ಲಿ ಅರ್ಜಿ ಸಲ್ಲಿಸಿ ಸ್ವೀಕೃತಿ ಪತ್ರ ಪಡೆದಿದ್ದರೂ ಇಲಾಖೆಯ ದಾಖಲಾತಿ ವಹಿಯಲ್ಲಿ ನಮೂದಾಗಿಲ್ಲ ಎಂದು ಅಧಿಕಾರಿಗಳು ವಾಪಸ್ ಕಳುಹಿಸುತ್ತಿದ್ದಾರೆ ಎಂದು ದೂರಿದರು.
ಗ್ರಾಮದಲ್ಲಿ ಹಲವು ಸರ್ವೆ ನಂಬರ್ಗಳು ದುರಸ್ತಿಯಾಗಿಲ್ಲ. ಇದರಿಂದಾಗಿ ಸಹಕಾರ ಸಂಘ ಹಾಗೂ ಬ್ಯಾಂಕ್ ಸಾಲ ಪಡೆಯುವ ಸಂದರ್ಭ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಆರ್ಟಿಸಿ ದುರಸ್ತಿಗೆ ಕ್ರಮ ವಹಿಸಬೇಕು ಎಂದು ಚೌಡ್ಲು ವಿಎಸ್ಎಸ್ಎನ್ ಅಧ್ಯಕ್ಷ ಕೆ.ಟಿ. ಪರಮೇಶ್ ಆಗ್ರಹಿಸಿದರು.
ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿಗೆ ವಾರದ ಎರಡು ದಿನ ಗ್ರಾಮ ಲೆಕ್ಕಿಗರು ಮತ್ತು ಕಂದಾಯ ನಿರೀಕ್ಷಕರು ಆಗಮಿಸಿ ಸಾರ್ವಜನಿಕರ ಅಹವಾಲು ಆಲಿಸಬೇಕೆಂದು ಪರಮೇಶ್ ಒತ್ತಾಯಿಸಿದರು.
ಶಾಂತಳ್ಳಿ ಹೋಬಳಿ ನಾಡ ಕಚೇರಿಯಲ್ಲಿ ಕೆಲ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಕುಂದಳ್ಳಿ ಲೆಕ್ಕಾಧಿಕಾರಿಯು ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳು ಗಮನಹರಿಸಬೇಕು ಎಂದರು. ವೃದ್ಧಾಪ್ಯ ವೇತನಕ್ಕೆ ಅರ್ಜಿ ಸಲ್ಲಿಸಿದ್ದರೂ ಈವರೆಗೆ ಪಿಂಚಣಿ ಬಂದಿಲ್ಲ ಎಂದು ಜಿತೇಂದ್ರ ದೂರಿದರು.
ತಾಲೂಕು ಕಚೇರಿಯಲ್ಲಿ ಹಲವು ಗ್ರಾಮಗಳಿಗೆ ಸಂಬAಧಿಸಿದ ಗ್ರಾಮ ನಕಾಶೆ ಲಭಿಸುತ್ತಿಲ್ಲ. ಈ ಬಗ್ಗೆ ಕೇಳಿದರೆ ಕಳೆದು ಹೋಗಿದೆ ಎಂದು ಉತ್ತರ ನೀಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನ ಹರಿಸಬೇಕೆಂದು ಕೆ.ಸಿ. ಉದಯಕುಮಾರ್ ಒತ್ತಾಯಿಸಿದರು.
ಕೂತಿ ಮಾರ್ಗವಾಗಿ ಹಾದುಹೋಗಿರುವ ಬೆಂಗಳೂರು-ಜಾಲ್ಸೂರ್ ರಾಜ್ಯ ಹೆದ್ದಾರಿಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು. ಈ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕೆಂದು ಆಗ್ರಹಿಸಿದ ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಎಂ. ದಿನೇಶ್, ತೊಳೂರುಶೆಟ್ಟಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು. ಹಲವು ಬಾರಿ ಅಬಕಾರಿ ಇಲಾಖೆಗೆ ದೂರು ನೀಡಿದ್ದರೂ, ಗ್ರಾಮ ಸಭೆಯಲ್ಲಿ ಚರ್ಚೆ ನಡೆಸಿದ್ದರೂ ಅಕ್ರಮಕ್ಕೆ ಕಡಿವಾಣ ಬಿದ್ದಿಲ್ಲ ಎಂದು ಆರೋಪಿಸಿದರು.
ಗ್ರಾಮಸ್ಥರ ಸಮಸ್ಯೆಗಳನ್ನು ಗಮನವಿಟ್ಟು ಆಲಿಸಿದ ಉಪ ವಿಭಾಗಾಧಿಕಾರಿಗಳು, ಸಣ್ಣ ಪುಟ್ಟ ಸಮಸ್ಯೆಗಳನ್ನು ತಕ್ಷಣ ಬಗೆಹರಿಸುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ತಾ.೨೮ ರಂದು ತೋಳೂರುಶೆಟ್ಟಳ್ಳಿಯಲ್ಲಿ ಪಿಂಚಣಿ ಅದಾಲತ್ ಹಮ್ಮಿಕೊಳ್ಳಲಾಗುವುದು. ಹಿರಿಯ ನಾಗರಿಕರು ಸಭೆಗೆ ಆಗಮಿಸಿ ತಮ್ಮ ಪಿಂಚಣಿ ಸಂಬAಧಿತ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಿಕೊಳ್ಳಬಹುದು ಎಂದರು.
ಸಭೆಯಲ್ಲಿ ಗ್ರಾ.ಪಂ. ಅಧ್ಯಕ್ಷ ನವೀನ್ಕುಮಾರ್, ಕೂತಿ ಗ್ರಾಮಾಧ್ಯಕ್ಷ ಹೆಚ್.ಡಿ. ಮೋಹನ್, ಕಂದಾಯ ನಿರೀಕ್ಷಕ ದಾಮೋಧರ್, ಗ್ರಾಮ ಲೆಕ್ಕಾಧಿಕಾರಿ ಕರಿಬಸವರಾಜು, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮಂಜುಳಾ ಅವರುಗಳು ಉಪಸ್ಥಿತರಿದ್ದರು.