ಕೂಡಿಗೆ, ಫೆ. ೨೧: ಕೂಡು ಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ರಸ್ತೆ ಅತಿಕ್ರಮಣ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಆ ರಸ್ತೆಯನ್ನು ತೆರವುಗೊಳಿಸುವಂತೆ ಒತ್ತಾಯಿಸಿದ್ದಾರೆ.
ಅನೇಕ ಬಾರಿ ಗ್ರಾಮ ಸಭೆ ಮತ್ತು ಮಾಸಿಕ ಸಭೆಯಲ್ಲಿ ಚರ್ಚಿಸಿದಂತೆ ರೈತರ ಜಮೀನಿಗೆ ತೆರಳಲು ಅನುಕೂಲವಾಗುವಂತೆ.
ಚಿಕ್ಕತ್ತೂರು ಗ್ರಾಮದ ಹಾರಂಗಿ ಮುಖ್ಯರಸ್ತೆಯಿಂದ ದೊಡ್ಡತ್ತೂರು ಫಾರಂ ಗದ್ದೆಗೆ ಸಂಪರ್ಕ ಕಲ್ಪಿಸುವ ೧೫೦ ಮೀ. ಉದ್ದದ ರಸ್ತೆಯನ್ನು ಅದೇ ಗ್ರಾಮವನ್ನು ಪ್ರತಿನಿಧಿಸುವ ಮಹಿಳಾ ಜನಪ್ರತಿನಿಧಿ ಅತಿಕ್ರಮಣ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹಲವು ಬಾರಿ ದೂರು ನೀಡಿದರೂ ಪಂಚಾಯತಿ ವತಿಯಿಂದ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ ಗ್ರಾಮಸ್ಥರು, ಸ್ಥಳಕ್ಕೆ ಆಗಮಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ ರಮೇಶ್, ಉಪಾಧ್ಯಕ್ಷ ಭಾಸ್ಕರ್ ನಾಯಕ್ ಮತ್ತು ಅಭಿವೃದ್ಧಿ ಅಧಿಕಾರಿ ಸಂತೋಷ್ ಅವರನ್ನು ತರಾಟೆಗೆ ತೆಗೆದುಕೊಂಡರು
ಈ ವ್ಯಾಪ್ತಿಯಲ್ಲಿ ಅನೇಕ ಮಂದಿ ಸಾರ್ವಜನಿಕರು ಮತ್ತು ರೈತರು ವಾಸವಿರುವ ಪ್ರದೇಶಕ್ಕೆ ತೆರಳುವ ರಸ್ತೆ ಬದಿ ಜನಪ್ರತಿನಿಧಿಯವರ ಜಮೀನಿದ್ದು ೧೫೦ ಮೀ. ಉದ್ದಕ್ಕೆ ಸುಮಾರು ೧೦ ಅಡಿಗಳಷ್ಟು ರಸ್ತೆ ಜಾಗ ಅತಿಕ್ರಮಿಸಿ ಬೇಲಿ ಅಳವಡಿಸಿಕೊಂಡಿದ್ದಾರೆ. ಇದರಿಂದ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿಲ್ಲ ಎಂದು ಗ್ರಾಮಸ್ಥರಾದ ಎಂ.ಬಿ. ಹರ್ಷ, ಎನ್. ರಾಮೇಗೌಡ, ದಿಲೀಪ್ ಕುಮಾರ್, ಸಿ.ಹೆಚ್. ಮಂಜು, ಸಚಿನ್, ರಮೀಜ್ ಅಹಮ್ಮದ್, ಚಂದ್ರು, ಲಕ್ಷ್ಮೀ, ಅಜಯ್, ಮೀನಾಕ್ಷಿ, ಪುಟ್ಟೇಗೌಡ, ರಾಧಾ, ಉದಯಕುಮಾರ್ ಮತ್ತಿತರರು ಆರೋಪಿಸಿದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಹರ್ಷ ಮತ್ತು ರಾಮೇಗೌಡ, ಹಲವು ಬಾರಿ ಪಂಚಾಯತಿ ಗಮನಕ್ಕೆ ತಂದರೂ ಕೂಡ ಇದುವರೆಗೆ ಯಾವುದೇ ಕ್ರಮಕೈಗೊಂಡಿಲ್ಲ. ಇದು ಕಳೆದ ೨೫ ವರ್ಷಗಳ ಸಮಸ್ಯೆ. ಜನಪ್ರತಿನಿಧಿ ಯಿಂದ ಗ್ರಾಮಸ್ಥರಿಗೆ ತೀವ್ರ ಅನಾನುಕೂಲ ಎದುರಾಗಿದೆ. ಈ ಬಗ್ಗೆ ಶಾಸಕರ ಗಮನಕ್ಕೆ ತಂದಿದ್ದು ಶಾಸಕರ ಸೂಚನೆಗೂ ಬೆಲೆಯಿಲ್ಲ ದಂತಾಗಿದೆ. ಪಂಚಾಯಿತಿ ಕ್ರಮ ಖಂಡಿಸಿ ಪಂಚಾಯಿತಿ ಮುಂದೆ ಹಾಗೂ ಮುಂಬರುವ ದಿನಗಳಲ್ಲಿ ತಹಶೀಲ್ದಾರ್ ಕಚೇರಿ ಮುಂದೆ ಅನಿರ್ದಿಷ್ಠಾವಧಿ ಮುಷ್ಕರ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಗ್ರಾ.ಪಂ. ಅಧ್ಯಕ್ಷೆ ಇಂದಿರಾ ರಮೇಶ್, ಈ ಬಗ್ಗೆ ಶಾಸಕರ ಗಮನಕ್ಕೆ ಕೂಡ ತರಲಾಗಿತ್ತು. ಅವರ ಸೂಚನೆ ಮೇರೆಗೆ ಸರ್ವೆ ಕೂಡ ನಡೆದಿದೆ. ಗ್ರಾಪಂ ಹಾಗೂ ಕಂದಾಯ ಇಲಾಖೆ ಮೂಲಕ ಒತ್ತುವರಿ ತೆರವಿಗೆ ಕ್ರಮವಹಿಸಲಾಗುವುದು ಎಂದರು.
ಈ ಸಂದರ್ಭ ಗ್ರಾಮ ಪಂಚಾಯಿತಿಯ ಚಿಕ್ಕತ್ತೂರು ಭಾಗದ ಸದಸ್ಯರಾದ ದಿನೇಶ್, ಭಾಗ್ಯ, ಖತೀಜಮ್ಮ, ಹಾರಂಗಿ ಭಾಗದ ಸದಸ್ಯ ಮಣಿಕಂಠ, ತಾ.ಪಂ. ಮಾಜಿ ಸದಸ್ಯ ಗಣೇಶ್, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಗುಜೇಂದ್ರ, ಮಾಜಿ ಸದಸ್ಯ ಕುಮಾರಸ್ವಾಮಿ ಮತ್ತಿತರರು ಇದ್ದರು.