ಮುಳ್ಳೂರು, ಫೆ. ೨೧: ಅಖಿಲ ಭಾರತ ವೀರಶೈವ ಮಹಾಸಭಾ ಕೊಡಗು ಜಿಲ್ಲಾ ಘಟಕದ ವತಿಯಿಂದ ಸಮಾಜದ ಬಾಂಧವರಿಗಾಗಿ ಪ್ರತಿವರ್ಷದಂತೆ ಈ ಬಾರಿಯೂ ಕ್ರೀಡಾಕೂಟ ಮತ್ತು ಧಾರ್ಮಿಕ ಸಭೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಯುವ ಘಟಕದ ಅಧ್ಯಕ್ಷ ಮೋಕ್ಷಿಕ್ ರಾಜ್ ಹೇಳಿದರು.
ಶನಿವಾರಸಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾ. ೨೬ ರಂದು ಕುಶಾಲನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾವಳಿ ಸೇರಿದಂತೆ ಮಕ್ಕಳಿಗೆ, ಪುರುಷ ಮತ್ತು ಮಹಿಳೆಯರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಕ್ರೀಡಾಕೂಟದ ಪ್ರಯುಕ್ತ ಅಂದು ಬೆಳಿಗ್ಗೆ ಕುಶಾಲನಗರ ಗಣಪತಿ ದೇವಸ್ಥಾನದಿಂದ ಆಟದ ಮೈದಾನದವರೆಗೆ ಕ್ರೀಡಾಜ್ಯೋತಿ ಮೆರವಣಿಗೆ ಬಂದ ನಂತರ ಕ್ರೀಡಾಕೂಟಕ್ಕೆ ಚಾಲನೆ ದೊರೆಯಲಿದೆ ಎಂದು ಮಾಹಿತಿ ನೀಡಿದರು. ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಕಾರ್ಯದರ್ಶಿ ರಾಜೇಶ್ವರಿ ನಾಗರಾಜ್ ಮಾತನಾಡಿ, ಮಾರ್ಚ್ ೩ ರಂದು ಕುಶಾಲನಗರದ ಎಪಿಸಿಎಂಎಸ್ ಸಭಾಂಗಣದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಅಂದು ಸಮಾಜದ ಬಾಂಧವರ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಜೊತೆಗೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದರು. ಗೋಷ್ಠಿಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಉಪಾಧ್ಯಕ್ಷ ಜಿ.ಎಂ. ಕಾಂತರಾಜ್, ಸೋಮವಾರಪೇಟೆ ತಾಲೂಕು ಘಟಕದ ಅಧ್ಯಕ್ಷ ಕೆ.ಬಿ. ಹಾಲಪ್ಪ, ತಾಲೂಕು ಯುವ ಘಟಕದ ಅಧ್ಯಕ್ಷ ಆದರ್ಶ ಹಾಜರಿದ್ದರು.