ವೀರಾಜಪೇಟೆ, ಫೆ. ೨೦: ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋಟ್ಯಂತರ ರೂಪಾಯಿಗಳ ಅವ್ಯವಹಾರ ನಡೆದಿದೆ. ದಾಖಲೆ ಸಹಿತ ಲೋಕಾಯುಕ್ತಕ್ಕೆ ದೂರು ನೀಡಲಾಗಿದ್ದು ತನಿಖೆ ಆರಂಭಗೊAಡಿದೆ ಎಂದು ಜಯಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಮಂಡೇಟ್ಟಿರ ಅನಿಲ್ ಅಯ್ಯಪ್ಪ ಹೇಳಿದರು.

ವೀರಾಜಪೇಟೆ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಜೆ ಶ್ರೀನಿವಾಸ್ ವಿರುದ್ಧ ಡಿಸೆಂಬರ್ ೨೨ ರಂದು ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಕಳೆದ ೨ ವರ್ಷದ ಹಿಂದೆ ಖರೀದಿ ಮಾಡಿದ ಪೀಠೋಪಕರಣಗಳನ್ನು ಸಾರ್ವಜನಿಕ ಟೆಂಡರ್ ಕರೆಯದೆ ತಮಗಿಷ್ಟ ಬಂದವರಿಗೆ ಲಕ್ಷಾಂತರ ರೂಗಳಿಗೆ ಮಾರಾಟ ಮಾಡಿ ಸರ್ಕಾರಕ್ಕೆ ಕೇವಲ ೧೫ ಸಾವಿರ ಲೆಕ್ಕ ತೋರಿಸಲಾಗಿದೆ. ಹೊರರೋಗಿಗಳಿಗೆ ನೀಡುವ ಚೀಟಿಗೆ ೫ ರೂಗಳಿಂದ ೧೦ ರೂಗಳಿಗೆ ಏರಿಕೆ ಮಾಡಲಾಗಿದೆ. ಹಳೆಯ ಎ.ಸಿಗೆ ಹೊಸ ಹೊರಕವಚ ಹಾಕಿ ಹೊಸದೆಂದು ಬಿಂಬಿಸಲಾಗಿದೆ. ಹಿಂದೆ ಪಿರಿಯಾಪಟ್ಟಣದಲ್ಲಿ ಕರ್ತವ್ಯದಲ್ಲಿದ್ದಾಗ ಮೂರು ಕೋಟಿಗೂ ಅಧಿಕ ಅವ್ಯವಹಾರ ನಡೆಸಿ ೨ ಬಾರಿ ಲೋಕಾಯುಕ್ತ ಬಲೆಗೆ ಬಿದ್ದು ಈಗಲು ತನಿಖೆ ಎದುರಿಸುತ್ತಿದ್ದಾರೆ ಎಂದು ದೂರಿದರು.

ಆಸ್ಪತ್ರೆಯ ಮುಂಭಾಗದಲ್ಲಿರುವ ಕ್ಯಾಂಟಿನ್ ನಿಯಮ ಬಾಹಿರವಾಗಿದ್ದು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಕ್ಯಾಂಟಿನ್ ಅಶುಚಿತ್ವದಿಂದ ಕೂಡಿದ್ದು ದರಗಳಲ್ಲಿಯು ವ್ಯತ್ಯಾಸ ಕಂಡುಬರುತ್ತಿದೆ. ವೈದ್ಯಾಧಿಕಾರಿಗಳ ಬೇಡಿಕೆಯಂತೆ ಮಾಂಸಹಾರಗಳನ್ನು ಮಾಡುತ್ತಿದ್ದಾರೆ. ರಜಾ ದಿನಗಳಲ್ಲಿ ಬಾರ್ ಆಗಿ ಪರಿವರ್ತನೆಯಾಗುತ್ತದೆ ಎಂದು ಆರೋಪಿಸಿದರು. ಗೋಷ್ಠಿಯಲ್ಲಿ ಪ್ರಮುಖರಾದ ಮಂಡೇಟಿರ ಪೊನ್ನಪ್ಪ, ಭೀಮಯ್ಯ, ಮತ್ಯಾಸ್ ಉಪಸ್ಥಿತರಿದ್ದರು.