ಮಡಿಕೇರಿ, ಫೆ. ೧೯: ತಂದೆ ಮಗನ ನಡುವೆ ಹಣದ ವಿಚಾರಕ್ಕೆ ಕಲಹ ಏರ್ಪಟ್ಟು ಮಗನನ್ನೇ ಗುಂಡಿಟ್ಟು ಕೊಲೆಗೈದ ಘಟನೆ ಮರಗೋಡು ಸಮೀಪದ ಕಟ್ಟೆಮಾಡು ಗ್ರಾಮದಲ್ಲಿ ನಡೆದಿದೆ.

ನಂದೇಟಿರ ನಿರನ್ ತಿಮ್ಮಯ್ಯ (೩೪) ತಂದೆ ಚಿಟ್ಟಿಯಪ್ಪ ಹೊಡೆದ ಗುಂಡೇಟಿಗೆ ಬಲಿಯಾದ ದುರ್ಧೈವಿ. ಚಿಟ್ಟಿಯಪ್ಪ ಅವರಿಗೆ ೨ ಗಂಡು ಮಕ್ಕಳಿದ್ದು, ಈ ಪೈಕಿ ಓರ್ವ ಕುಟ್ಟದಲ್ಲಿರುವ ರೆಸಾರ್ಟ್ವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಮೃತ ನಿರನ್ ಗೋವಾದಿಂದ ಕೆಲಸ ಬಿಟ್ಟು ಕಟ್ಟೆಮಾಡುವಿನಲ್ಲಿನ ತನ್ನ ತೋಟವನ್ನು ನೋಡಿಕೊಳ್ಳುತ್ತಿದ್ದ ಎನ್ನಲಾಗಿದೆ.

ಇಬ್ಬರು ಮಕ್ಕಳಿಗೂ ತೋಟವನ್ನು ಹಂಚಿಕೆ ಮಾಡಲಾಗಿದೆ. ಈ ಹಿನ್ನೆಲೆ ಚಿಟ್ಟಿಯಪ್ಪ ಅವರಿಗೆ ಪ್ರತಿ ತಿಂಗಳು ಇಬ್ಬರು ಮಕ್ಕಳು ತಲಾ ರೂ. ೨ ಸಾವಿರದಂತೆ ಜೀವನ ನಿರ್ವಹಣೆಗೆಂದು ಹಣ ನೀಡುವ ಷರತ್ತು ವಿಧಿಸಲಾಗಿತ್ತು. ಅದರಂತೆ ಮಕ್ಕಳು ಪ್ರತಿ ತಿಂಗಳು ಹಣ ನೀಡುತ್ತಿದ್ದರು. ಈ ತಿಂಗಳು ಹಿರಿಯ ಪುತ್ರ ತಂದೆಗೆ ಹಣ ನೀಡಿದ್ದು, ನಿರನ್ ನೀಡಿರಲಿಲ್ಲ. ಈ ವಿಚಾರಕ್ಕೆ ಅಪ್ಪ ಹಾಗೂ ಮಗನ ನಡುವೆ ಕೆಲದಿನದಿಂದ ಜಗಳ ನಡೆಯುತ್ತಿತ್ತು.

(ಮೊದಲ ಪುಟದಿಂದ)

ಇAದು ಸಂಜೆ ೪ ಗಂಟೆ ವೇಳೆಗೆ ಕೋಪಗೊಂಡ ತಂದೆ ಚಿಟ್ಟಿಯಪ್ಪ ಮಗ ಮನೆಯಲ್ಲಿ ಸೋಫಾದ ಮೇಲೆ ಕುಳಿತು ಟಿವಿ ನೋಡುತ್ತಿದ್ದ ಸಂದರ್ಭ ಎದೆಭಾಗಕ್ಕೆ ಒಂಟಿ ನಳಿಕೆ ಕೋವಿಯಲ್ಲಿ ಗುಂಡಿಕ್ಕಿದ್ದಾರೆ. ಪರಿಣಾಮ ಗಂಭೀರ ಗಾಯಗೊಂಡ ನಿರನ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಬಳಿಕ ಆರೋಪಿ ತಂದೆ ಪೊಲೀಸರಿಗೆ ಶರಣಾಗಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಭೇಟಿ ನೀಡಿ ಪರಿಶೀಲಿಸಿದರು. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.