ಮಡಿಕೇರಿ, ಫೆ. ೧೯: ಬೆಟ್ಟ ಗುಡ್ಡಗಳಲ್ಲಿ ರೆಸಾರ್ಟ್ಗಳನ್ನು ನಿರ್ಮಾಣ ಮಾಡುವ ಮೂಲಕ ಸುಂದರ ಪ್ರಕೃತಿ ಸೌಂದರ್ಯವನ್ನು ಹೊಂದಿರುವ ಕೊಡಗಿನ ನಿಸರ್ಗವನ್ನು ನಾಶ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ಯಂ.ಸಿ. ನಾಣಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.

ನಗರದ ಪತ್ರಿಕಾಭವನ ಸಭಾಂಗಣದಲ್ಲಿ ನಡೆದ ಕೊಡವ ಮಕ್ಕಡ ಕೂಟ ಮತ್ತು ಕಾವೇರಿಕೇರಿ ಕೊಡವ ಸಂಘದ ಸಂಯುಕ್ತಾಶ್ರಯದಲ್ಲಿ ವಕೀಲ, ಕ್ರೀಡಾಪಟು ಹಾಗೂ ಬರಹಗಾರ ಬಾಳೆಯಡ ಕಿಶನ್ ಪೂವಯ್ಯ ಅವರು ಬರೆದಿರುವ ‘ವ್ಯಕ್ತಿ ಪರಿಚಯ ಮತ್ತು ಸಾಮಾಜಿಕ ಚಿಂತನೆ’ ಹಾಗೂ ‘ರಾಜಕೀಯ ಮತ್ತು ಪ್ರಕೃತಿ’ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇಂದು ಯಾವುದೇ ವಿಧದಲ್ಲೂ ಪುಟ್ಟ ಜಿಲ್ಲೆ ಕೊಡಗಿನ ಪ್ರಕೃತಿಯನ್ನು ರಕ್ಷಣೆ ಮಾಡಲು ಸಾಧ್ಯವಾಗುತ್ತಿಲ್ಲ. ರಾಜ್ಯದ ಬೇರೆ ಜಿಲ್ಲೆಗಳನ್ನು ಹೋಲಿಸಿದರೆ ಕೊಡಗು ಹವಾನಿಯಂತ್ರಿತ ಗುಣವನ್ನು ಹೊಂದಿದೆ. ಅತ್ಯಂತ ಶ್ರೇಷ್ಠತೆಯನ್ನು ಹೊಂದಿರುವ ಇಲ್ಲಿನ ಪರಿಸರ ಮತ್ತು ಬೆಟ್ಟ ಗುಡ್ಡಗಳು ರೆಸಾರ್ಟ್ಗಳ ನಿರ್ಮಾಣದಿಂದ ನಾಶವಾಗುತ್ತಿದೆ. ಪರಿಸ್ಥಿತಿ ಹೀಗಿದ್ದರೂ ಜನಪ್ರತಿನಿಧಿಗಳು ಮಾತ್ರ ಏನನ್ನೂ ಮಾತನಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಭ್ರಷ್ಟಾಚಾರ ಮಿತಿ ಮೀರಿದೆ, ರಾಜಕೀಯ ಹೊಲಸು ಎನ್ನುವ ಅಭಿಪ್ರಾಯ ಎಲ್ಲೆಡೆ ಮೂಡಿದೆ. ಹೊಡಿ, ಬಡಿ, ಕಡಿ ರಾಜಕಾರಣ ನಿರ್ಮಾಣವಾಗಿದೆ, ನಾನು ರಾಜಕೀಯದಿಂದ ದೂರ ಉಳಿಯಲು ಈ ಸಂದಿಗ್ಧ ಪರಿಸ್ಥಿತಿಯೂ ಒಂದು ಕಾರಣವಾಗಿದೆ ಎಂದರು.

ದೇಶದ ಬಹುತೇಕ ಪತ್ರಿಕೆಗಳು ಮತ್ತು ಮಾಧ್ಯಮಗಳು ಇಂದು ಉದ್ಯಮಿಗಳ ಕೈಯಲ್ಲಿದೆ. ಬೆರಳೆಣಿಕೆಯಷ್ಟು ಪತ್ರಿಕೆಗಳು ಮಾತ್ರ ನೇರವಾಗಿ ಬರೆಯುವುದನ್ನು ಮುಂದುವರೆಸಿವೆ ಎಂದು ಯಂ.ಸಿ. ನಾಣಯ್ಯ ಗಮನ ಸೆಳೆದರು. ಬರಹಗಾರ ಕಿಶನ್ ಪೂವಯ್ಯ ಅವರ ಬರವಣಿಗೆಯ ಶೈಲಿಯನ್ನು ಕೊಂಡಾಡಿದರು.

ಆತ್ಮವAಚನೆ ಮಾಡದ ಬರಹ

‘ರಾಜಕೀಯ ಮತ್ತು ಪ್ರಕೃತಿ’ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ವಕೀಲ ಹಾಗೂ ಸಾಹಿತಿ ಕೆ.ಪಿ. ಬಾಲಸುಬ್ರಹ್ಮಣ್ಯ, ಬರಹದಿಂದ ಸಮಾಜವನ್ನು ತಿದ್ದಬಹುದು ಎನ್ನುವ ಭ್ರಮೆ ಬೇಡ, ವೇದವ್ಯಾಸರ ಕಾಲದಿಂದಲೂ ಇದು ಸಾಧ್ಯವಾಗಿಲ್ಲ. ಆದರೆ ಪ್ರಯತ್ನಗಳು ಮುಂದುವರೆಯಲಿ, ಬರಹದ ಮೂಲಕ ಅಳಲನ್ನು ತೋಡಿಕೊಳ್ಳ ಬಹುದು, ಆತ್ಮವಂಚನೆ ಮಾಡದೆ ಬರೆಯುವುದು ಮುಖ್ಯ ಎಂದರು.

ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡ ಇತಿಹಾಸವಿದೆ, ಆದರೆ ಇಂದು ಸಾಹಿತ್ಯ ಮಾರುಕಟ್ಟೆಯ ಸರಕಾಗಿ ಮಾರ್ಪಟ್ಟಿದೆ. ಕೆಲವು ಬರಹಗಾರರು ದೊಡ್ಡ ಬರಹಗಾರರೊಂದಿಗೆ ಸೆಲ್ಫಿ ತೆಗೆಸಿಕೊಂಡು ದೊಡ್ಡವರೆನಿಸಿ ಕೊಳ್ಳುತ್ತಿದ್ದಾರೆ. ಇಂದು ಖಾಲಿ ಪಾತ್ರೆಗಳು ಶಬ್ಧ ಮಾಡುತ್ತಿವೆ, ಜ್ಞಾನ ತುಂಬಿದವರು ಸುಮ್ಮನಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ತಪ್ಪನ್ನು ಮುಚ್ಚಿಕೊಳ್ಳುವವರು ದೊಡ್ಡವರೆನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲರಿಗೂ ದುರ್ಗುಣಗಳಿವೆ, ಕಡಿಮೆ ದುರ್ಗುಣ ಗಳನ್ನು ಹೊಂದಿರುವವರನ್ನು ಬೆಂಬಲಿಸಬೇಕಾಗಿದೆ ಎಂದರು.

ಸಮಾಜ ಸುಧಾರಣೆ ಸಾಧ್ಯ

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ‘ಶಕ್ತಿ’ ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ. ರಾಜೇಂದ್ರ, ಪುಸ್ತಕಗಳನ್ನು ಕೊಂಡು ಓದುವವರ ಸಂಖ್ಯೆ ಕಡಿಮೆ ಯಾಗುತ್ತಿದೆ. ಸಾಮಾಜಿಕ ಜಾಲತಾಣ ಗಳೆಡೆಗೆ ಜನ ಆಕರ್ಷಿತರಾಗುತ್ತಿದ್ದಾರೆ, ಇದರಿಂದ ಪ್ರಚೋದನೆ ಮತ್ತು ಗಾಳಿ ಸುದ್ದಿಗಳು ಹೆಚ್ಚಾಗುತ್ತಿದೆ. ಸಮಾಜದಲ್ಲಿ ದ್ವೇಷದ ವಾತಾವರಣ ಸೃಷ್ಟಿಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬರಹಗಾರನಿಗೆ ಸಾಮಾಜಿಕ ಚಿಂತನೆ ಮತ್ತು ಜಾಗೃತಿ ಅತಿಮುಖ್ಯ. ಆಳವಾದ ಚಿಂತನ, ಮಂಥನಗಳ ಮೂಲಕ ಲೇಖನಗಳನ್ನು ಬರೆದು ಪುಸ್ತಕಗಳನ್ನು ಪ್ರಕಟಿಸಬೇಕು, ಇವುಗಳಿಂದ ಸಮಾಜದ ಸುಧಾರಣೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.

‘ವ್ಯಕ್ತಿ ಪರಿಚಯ ಮತ್ತು ಸಾಮಾಜಿಕ ಚಿಂತನೆ’ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಎಕ್ಸ್ಪ್ರೆಸ್ ಲಿ. ಸೌತ್ ಬ್ಲೂ ಡಾರ್ಟ್ ನ ಹಿರಿಯ ಉಪಾಧ್ಯಕ್ಷ ಹಾಗೂ ಪ್ರಾದೇಶಿಕ ಮುಖ್ಯಸ್ಥ ಬಾಳೆಯಡ ಸಿ.ಕಾಳಪ್ಪ, ಪುಸ್ತಕಗÀಳು ಮಾರ್ಗ ದರ್ಶಕವಾಗಿ ಕೆಲಸ ಮಾಡುತ್ತವೆ, ಜೀವನದಲ್ಲಿ ಬದಲಾವಣೆಯನ್ನು ತರುತ್ತವೆ. ಆದರೆ ಇಂದು ಮೊಬೈಲ್ ಮತ್ತು ಟಿವಿ ಪ್ರಭಾವದಿಂದಾಗಿ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದರು.

ಬರಹಗಾರ ಪುಸ್ತಕದ ಆಧಾರ ಸ್ತಂಭವಾಗಿದ್ದಾನೆ, ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವ ಮೂಲಕ ಬರಹಗಾರನಿಗೆ ಪ್ರೋತ್ಸಾಹ ನೀಡಬೇಕು ಎಂದು ಕರೆ ನೀಡಿದರು.

ಸಾಹಿತ್ಯಾಭಿಮಾನ ಶೂನ್ಯ: ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ ಕೊಡಗಿನಲ್ಲಿ ಬರಹಗಾರರಿದ್ದಾರೆ, ಆದರೆ ಸಾಹಿತ್ಯಾಭಿಮಾನಿಗಳು ಶೂನ್ಯ ಸಂಖ್ಯೆಯಲ್ಲಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಪತ್ರಿಕೆ ಮತ್ತು ಪುಸ್ತಕಗಳನ್ನು ಓದುವವರ ಸಂಖ್ಯೆ ಕಡಿಮೆಯಾಗಿದೆ. ಪುಸ್ತಕಗಳನ್ನು ಓದುವುದರಿಂದ ಜ್ಞಾನ ಹೆಚ್ಚಾಗುತ್ತದೆ, ಬರಹಗಾರರು ಹಾಗೂ ಓದುಗರ ಸಂಖ್ಯೆ ಹೆಚ್ಚಾಗಲಿ, ಎಲ್ಲರಲ್ಲಿ ಅರಿವು ಮೂಡಲಿ ಎಂದರು.

ಕೊಡವ ಮಕ್ಕಡ ಕೂಟ ದಶಮಾನೋತ್ಸವದ ಸಂಭ್ರಮದಲ್ಲಿದ್ದು, ಈ ಸಂದರ್ಭ ೬೧ ಮತ್ತು ೬೨ನೇ ಪುಸ್ತಕವನ್ನು ಬಿಡುಗಡೆಗೊಳಿಸುತ್ತಿರು ವುದು ಹೆಮ್ಮೆ ಎನಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಎರಡು ಪುಸ್ತಕಗಳ ಬರಹಗಾರ, ವಕೀಲ ಬಾಳೆಯಡ ಕಿಶನ್ ಪೂವಯ್ಯ ಮಾತನಾಡಿ ಬರಹಗಾರರು ಆರ್ಥಿಕವಾಗಿ ಬಡವರಾಗಿರುತ್ತಾರೆ, ದಾನಿಗಳ ಪ್ರೋತ್ಸಾಹದಿಂದ ಪುಸ್ತಕಗಳನ್ನು ಹೊರ ತರುತ್ತಾರೆ. ನನಗೂ ದಾನಿಗಳು ಸಹಕಾರ ನೀಡಿದ್ದಾರೆ, ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ಕುಟುಂಬದ ಸದಸ್ಯರ ಪರಿಶ್ರಮ, ಹಿರಿಯರ ಪ್ರೋತ್ಸಾಹ ಮತ್ತು ಕೊಡವ ಮಕ್ಕಡ ಕೂಟದಿಂದ ಎರಡು ಪುಸ್ತಕಗಳನ್ನು ಬಿಡುಗಡೆ ಮಾಡಲು ಸಾಧ್ಯವಾಯಿತು ಎಂದು ಸ್ಮರಿಸಿಕೊಂಡರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾವೇರಿಕೇರಿ ಕೊಡವ ಸಂಘದ ಅಧ್ಯಕ್ಷರಾದ ಬಲ್ಯಾಟಂಡ ಲತಾ ಚಂಗಪ್ಪ ಪುಸ್ತಕಗಳನ್ನು ಓದುವುದರಿಂದ ಸಾಮಾನ್ಯ ಜ್ಞಾನ ವೃದ್ಧಿಯಾಗುತ್ತದೆ. ಮಕ್ಕಳು ಮೊಬೈಲ್ ಮತ್ತು ಟಿವಿ ಯಿಂದ ದೂರ ಉಳಿದು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಓದುವುದರ ಮೂಲಕ ಬರಹಗಾರರಿಗೆ ಪ್ರೋತ್ಸಾಹವನ್ನು ನೀಡಬೇಕು ಎಂದರು.

ಪಾಲೆಯAಡ ಕಾವ್ಯ ದೇವಯ್ಯ ಪ್ರಾರ್ಥಿಸಿ, ಕರುವಂಡ ಸೀಮಾ ಗಣಪತಿ ಸ್ವಾಗತಿಸಿ, ಬಾಳೆಯಡ ದಿವ್ಯಾ ಮಂದಪ್ಪ ಕಾರ್ಯಕ್ರಮ ನಿರೂಪಿಸಿದರು.