ಮಡಿಕೇರಿ, ಫೆ. ೧೯: ಯುಗಾದಿ ಪ್ರಯುಕ್ತ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ನಾಪೋಕ್ಲು ಘಟಕದ ವತಿಯಿಂದ ಪ್ರಪ್ರಥಮ ಬಾರಿಗೆ ಹಿಂದೂ ಚಾಂಪಿಯನ್ ಟ್ರೋಫಿ ಏರ್ಪಡಿಸಿದ್ದು, ಮಾರ್ಚ್ ೨೪ರಿಂದ ೨೬ರವರೆಗೆ ಕ್ರಿಕೆಟ್ ಮತ್ತು ಹಗ್ಗಜಗ್ಗಾಟ ನಡೆಯಲಿದೆ ಎಂದು ಘಟಕದ ಸಂಚಾಲಕ ರಾಧಾಕೃಷ್ಣ ರೈ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಪೋಕ್ಲುವಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ. ನಾಕೌಟ್ ಮಾದರಿಯಲ್ಲಿ ಪಂದ್ಯ ನಡೆಯಲಿದ್ದು, ಮಾ.೨೪ರಂದು ಬೆಳಗ್ಗೆ ೯.೩೦ ಗಂಟೆಗೆ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಲಾಗುವುದು. ಮಾ. ೨೬ ರಂದು ಫೈನಲ್ ಪಂದ್ಯಾವಳಿಯ ಬಳಿಕ ಹಗ್ಗಜಗ್ಗಾಟ ನಡೆಯಲಿದ್ದು, ಸಂಜೆ ೫.೩೦ ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು.

ಮುಕ್ತ ಕ್ರಿಕೆಟ್ ಪಂದ್ಯಾಟ ಇದಾಗಿದ್ದು, ತಂಡಗಳ ಹೆಸರು ನೋಂದಣಿಗೆ ಮಾರ್ಚ್ ೧೫ ಕೊನೆಯ ದಿನವಾಗಿದೆ. ಮೊದಲ ೩೨ ತಂಡಗಳಿಗೆ ಅವಕಾಶ ನೀಡಲಾಗುತ್ತದೆ. ಕ್ರಿಕೆಟ್ ಪಂದ್ಯಾಟದ ವಿಜೇತರಿಗೆ ಮೊದಲ ಬಹುಮಾನವಾಗಿ ೫೦ ಸಾವಿರ ನಗದು, ದ್ವಿತೀಯ ೨೫ ಸಾವಿರ ನಗದು ಮತ್ತು ಟ್ರೋಫಿ, ಹಗ್ಗಜಗ್ಗಾಟದ ವಿಜೇತ ತಂಡಕ್ಕೆ ಪ್ರಥಮ ೧೫ ಸಾವಿರ ನಗದು, ದ್ವಿತೀಯ ೧೦ ಸಾವಿರ ನಗದು ಮತ್ತು ಟ್ರೋಫಿ ನೀಡಲಾಗುತ್ತದೆ. ಎರಡು ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ತೋರುವ ಆಟಗಾರರಿಗೆ ವೈಯಕ್ತಿಕ ಬಹುಮಾನವನ್ನೂ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಘಟಕದ ಸಹ ಸಂಚಾಲಕ ಸಿ. ಕುಮಾರ್, ಕಾರ್ಯದರ್ಶಿ ಜಗದೀಶ್, ನಿಕಟಪೂರ್ವ ಸಂಚಾಲಕ ಪ್ರತೀಪ, ಗೋರಕ್ಷಕ ಪ್ರಮುಖ್ ದಿಲೀಪ್, ಸದಸ್ಯ ಪ್ರದೀಪ್ ಪಿ.ಹೆಚ್ ಹಾಜರಿದ್ದರು.