ಮಡಿಕೇರಿ, ಫೆ. ೨೦: ರಾಜ್ಯ ಸರ್ಕಾರ ತನ್ನ ಬಜೆಟ್‌ನಲ್ಲಿ ನೇರ ಪಾವತಿಯನ್ನು ಜಾರಿಗೊಳಿಸದೆ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರನ್ನು ವಂಚಿಸಿದೆ. ಈ ಹಿನ್ನೆಲೆ ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ತಾ.೨೨ ರಂದು ‘ನಮ್ಮ ನಡಿಗೆ ಮುಖ್ಯ ಮಂತ್ರಿಗಳ ಮನೆ ಕಡೆಗೆ’ ಘೋಷಣೆಯೊಂದಿಗೆ ಮುಖ್ಯ ಮಂತ್ರಿಗಳ ಮನೆ ಮುಂಭಾಗ ಅನಿರ್ದಿಷ್ಟಾವಧಿ ಧರಣಿ ಮುಷ್ಕರ ನಡೆಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ನೌಕರರ ಸಂಘÀದ ಜಿಲ್ಲಾ ಅಧ್ಯಕ್ಷ ಈರಪ್ಪ ಶೆಟ್ಟಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ವ್ಯಾಪಿ ನಗರಸಭೆ, ಪಟ್ಟಣ ಪಂಚಾಯ್ತಿ, ನಗರಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ೧೩ ಸಾವಿರಕ್ಕೂ ಹೆಚ್ಚಿನ ಮಂದಿ ನೀರು ಗಂಟಿಗಳಾಗಿ, ಡಾಟಾ ಆಪರೇಟರ್, ಸ್ವಚ್ಛತಾ ನೌಕರರಾಗಿ, ವಾಹನ ಚಾಲಕರಾಗಿ, ಬೀದಿ ದೀಪ ನಿರ್ವಾಹಕರಾಗಿ, ಗಾರ್ಡನರ್‌ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸೇವಾಭದ್ರತೆ ಇಲ್ಲದೆ ಸಂಕಷ್ಟದಲ್ಲಿರುವ ಇವರಿಗೆ ನೇರ ಪಾವತಿಯ ಮೂಲಕ ಸೇವಾ ಭದ್ರತೆ ಒದಗಿಸಬೇಕೆಂದು ಒತ್ತಾಯಿಸಿದರು,

ಈ ಹಿಂದೆ ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸಿದ ಸಂದರ್ಭ ಮುಖ್ಯ ಮಂತ್ರಿಗಳು, ಹೊರಗುತ್ತಿಗೆ ನೌಕರರನ್ನು ನೆೆÃರ ನೇಮಕಾತಿಗೆ ಒಳಪಡಿಸುವ ಭರವಸೆ ನೀಡಿದ್ದರು. ಬಜೆಟ್‌ನಲ್ಲಿ ನಮ್ಮ ಸಮಸ್ಯೆಗಳಿಗೆ ಪರಿಹಾರ ದೊರಕಬಹುದೆನ್ನುವ ನಿರೀಕ್ಷೆ ಹುಸಿಯಾಗಿರುವುದರಿಂದ ಮತ್ತೆ ಪ್ರತಿಭಟನೆಗೆ ಮುಂದಾಗುತ್ತಿರುವುದಾಗಿ ಈರಪ್ಪ ಶೆಟ್ಟಿ ಹೇಳಿದರು.

ಹೊರಗುತ್ತಿಗೆ ನೌಕರರಿಗೆ ಪೌರ ಕಾರ್ಮಿಕರ ಮಾದರಿಯಲ್ಲಿ ನೇರ ಪಾವತಿಯನ್ನು ಹಂತ ಹಂತವಾಗಿ ಜಾರಿಗೊಳಿಸಲೇಬೇಕೆಂದು ಒತ್ತಾಯಿಸಿದ ಅವರು, ಬೇಡಿಕೆ ಈಡೇರುವವರೆಗೆ ಮುಖ್ಯ ಮಂತ್ರಿಗಳ ಮನೆಯ ಮುಂಭಾಗ ಧರಣಿ ಮುಷ್ಕರ ನಡೆಸಲಿರುವುದಾಗಿ ಹೇಳಿದರು.

ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ೮೦ ಮಂದಿ ಹೊರಗುತ್ತಿಗೆ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರೆಲ್ಲರೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಾರ್ವಜನಿಕರು ಹೊರಗುತ್ತಿಗೆ ನೌಕರರ ಸಂಕಷ್ಟಗಳನ್ನು ಅರಿತು, ಪ್ರತಿಭಟನೆಗೆ ಸಹಕರಿಸಬೇಕೆಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಜಿಲ್ಲಾ ಸಂಘದ ಉಪಾಧ್ಯಕ್ಷರಾದ ಎ.ಎ.ಬೋಪಣ್ಣ, ಕಾರ್ಯದರ್ಶಿ ಟಿ.ಬಿ.ರಮೇಶ್, ಕುಟ್ಟಪ್ಪ, ಜಿಲ್ಲಾ ಸಂಚಾಲಕರಾದ ಮಹದೇವಪ್ಪ, ಸಂಘÀದ ನೀರು ಸರಬರಾಜು ವಿಭಾಗದ ಅಧ್ಯಕ್ಷರಾದ ಶಿವ ಪ್ರಕಾಶ್ ಶೆಟ್ಟಿ, ರಾಜ್ಯ ಸಂಚಾಲಕ ಹೆಚ್.ಪಿ.ಗುರುರಾಜ್ ಉಪಸ್ಥಿತರಿದ್ದರು.