ಕುಶಾಲನಗರ, ಫೆ. ೧೯: ಕುಶಾಲನಗರ ಪಟ್ಟಣದ ಮಾರುಕಟ್ಟೆ ರಸ್ತೆಯ ಕಟ್ಟಡವೊಂದರಲ್ಲಿ ಅನಧಿಕೃತವಾಗಿ ಜನರನ್ನು ಸೇರಿಸಿ ಸಾಮೂಹಿಕ ಪ್ರಾರ್ಥನೆ ಮಾಡುತ್ತಿದ್ದ ಆರೋಪದಲ್ಲಿ ನಗರ ಪೊಲೀಸರು ಭಾನುವಾರ ಹಲವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದರು.

ಹಳೆ ಮಾರುಕಟ್ಟೆ ರಸ್ತೆಯ ಸ್ಮಶಾನ ಎದುರಿನ ಬಹುಮಹಡಿ ಕಟ್ಟಡದ ಮುಂದೆ ದೊಡ್ಡ ಸಂಖ್ಯೆಯಲ್ಲಿ ವಾಹನಗಳು ನಿಂತಿದ್ದಲ್ಲದೆ ಗುಂಪು ಗುಂಪಾಗಿ ಜನರು ಬರುತ್ತಿರುವುದನ್ನು ಗಮನಿಸಿದ ಹಿಂದೂ ಸಂಘಟನೆಗಳ ಮುಖಂಡರು ಕಟ್ಟಡದ ಮಾಲೀಕರನ್ನು ವಿಚಾರಿಸಿ ನಂತರ ಅನಧಿಕೃತ ಪ್ರಾರ್ಥನಾ ಕೇಂದ್ರಕ್ಕೆ ದಾಳಿ ಮಾಡಿದ್ದಾರೆ.

ಈ ಸಂದರ್ಭ ಸಂತೋಷ್ ಎಂಬವರನ್ನು ಪ್ರಶ್ನಿಸಿದಾಗ ಕಳೆದ ಹಲವು ವರ್ಷಗಳಿಂದ ಇಲ್ಲಿ ಪ್ರಾರ್ಥನೆ ನಡೆಯುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ ಕಟ್ಟಡದಲ್ಲಿ ಪ್ರಾರ್ಥನೆ ನಡೆಸಲು ಯಾವುದೇ ಅನುಮತಿ ಪಡೆದಿರಲಿಲ್ಲ ಎಂದು ಹಿಂದೂ ಸಂಘಟನೆಗಳ ಮುಖಂಡರು ಪೊಲೀಸರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ತಕ್ಷಣ ಆಗಮಿಸಿದ ಪೊಲೀಸರು ಹಲವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಡಿವೈಎಸ್ಪಿ ಗಂಗಾಧರಪ್ಪ ಅವರ ನೇತೃತ್ವದಲ್ಲಿ ನೂರಕ್ಕೂ ಅಧಿಕ ಜನರು ಕಟ್ಟಡದ ಮಾಲೀಕ, ಪ್ರಾರ್ಥನಾ ಮಂದಿರದ ಮುಖ್ಯಸ್ಥ ಸೇರಿದಂತೆ ಹಲವರ ವಿಚಾರಣೆ ನಡೆಸುತ್ತಿದ್ದಾರೆ.

ಈ ಮಧ್ಯೆ ಪ್ರಾರ್ಥನೆ ನಡೆಸುತ್ತಿದ್ದ ಕಟ್ಟಡವೂ ಅಕ್ರಮವಾಗಿದ್ದು, ಪುರಸಭೆಯಿಂದ ಯಾವುದೇ ರೀತಿಯ ಅನುಮತಿ ಪಡೆಯದೆ ಇರುವ ಕಾರಣ ಕಟ್ಟಡ ಮಾಲೀಕನ ಮೇಲೆ ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಪುರಸಭೆ ಸದಸ್ಯ ಅಮೃತರಾಜ್ ನೇತೃತ್ವದಲ್ಲಿ ಸ್ಥಳದಲ್ಲಿ ಪ್ರತಿಭಟನೆ ನಡೆಸಲಾಯಿತು.

ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಹ ಕಾರ್ಯದರ್ಶಿ ಸಂತೋಷ್, ಹಿಂದೂ ಜಾಗರಣಾ ವೇದಿಕೆಯ ರಾಜೀವ್, ಹಿಂದೂಪರ ಸಂಘಟನೆಗಳ ಮುಖಂಡರಾದ ಪ್ರವೀಣ್, ದಿನೇಶ್, ಸುಧೀರ್, ಅನಂತ್, ಹರ್ಷ, ಗಣಪತಿ, ಪೃಥ್ವಿ ರಾಜ್, ಪ್ರಶಾಂತ್, ಪ್ರದೀಪ್ ಮತ್ತಿತರರು ಈ ವೇಳೆ ಇದ್ದರು.

ಡಿವೈಎಸ್ಪಿ ಗಂಗಾಧರಪ್ಪ, ಕುಶಾಲನಗರ ಪೊಲೀಸ್ ಇನ್ಸ್ಪ್ಪೆಕ್ಟರ್ ಶ್ರೀಕಾಂತ್ ನೇತೃತ್ವದಲ್ಲಿ ತನಿಖೆ ಮುಂದುವರೆದಿದೆ. ಅನಧಿಕೃತ ಪ್ರಾರ್ಥನಾ ಮಂದಿರ ಸಭಾಂಗಣಕ್ಕೆ ಪೊಲೀಸರು ಬೀಗ ಜಡಿದು ಕ್ರಮ ಕೈಗೊಂಡಿದ್ದಾರೆ.