ನಾಪೋಕ್ಲು, ಫೆ. ೧೯: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಮಡಿಕೇರಿಯ ಸಮೂಹ ಸಂಪನ್ಮೂಲ ಕೇಂದ್ರದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಾಚ್ಯಪ್ರಜ್ಞೆ ವಿಷಯದ ಕುರಿತು ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ತಾಲೂಕಿನ ವಿವಿಧ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳ ವಿದ್ಯಾರ್ಥಿಗಳು ರಸಪ್ರಶ್ನೆ ,ಪ್ರಬಂಧ, ಭಾಷಣ ಹಾಗೂ ಚಿತ್ರಕಲಾ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ಪ್ರಾಚ್ಯ ಪ್ರಜ್ಞೆ ವಿಷಯದ ಕುರಿತು ಏರ್ಪಡಿಸಲಾಗಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ಮಡಿಕೇರಿಯ ಸಂತ ಮೈಕಲರ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಮನ್ವಿತ್ ಮತ್ತು ನಯನ ತಂಡ ಪ್ರಥಮ ಸ್ಥಾನ ಗಳಿಸಿದರು. ಕಡಗದಾಳು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ವಿಷ್ಣು ಮತ್ತು ಸಂಗೀತ ದ್ವಿತೀಯ ಸ್ಥಾನ ಗಳಿಸಿದರು. ಮಡಿಕೇರಿಯ ಸಂತ ಜೋಸೆಫರ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಅನ್ ಶಿಯ ಮತ್ತು ಸಾಕ್ಷಿ ತಂಡ ತೃತೀಯ ಸ್ಥಾನ ಗಳಿಸಿತು. ಪ್ರಬಂದ ಸ್ಪರ್ಧೆಯಲ್ಲಿ ಸಂತ ಮೈಕಲರ ಪ್ರೌಢಶಾಲೆಯ ಎಸ್. ಭೂಮಿಕಾ ಪ್ರಥಮ ಸ್ಥಾನವನ್ನು, ಮೂರ್ನಾಡು ಅನುದಾನಿತ ಪ್ರೌಢಶಾಲೆಯ ಸಿ.ಎಸ್ ಪ್ರಜ್ಞಾ ದ್ವಿತೀಯ ಸ್ಥಾನವನ್ನು, ಮಡಿಕೇರಿಯ ಸಂತಜೋಸೆಫರ ಪ್ರೌಢಶಾಲೆಯ ಅಂಜಲ್ ಎಸ್. ಜೋಶಿ ತೃತೀಯ ಸ್ಥಾನವನ್ನು ಗಳಿಸಿದರು. ಭಾಷಣ ಸ್ಪರ್ಧೆಯಲ್ಲಿ ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆಯ ಧನುಶ್ರೀ ಪ್ರಥಮ ಸ್ಥಾನವನ್ನು, ಹಾಕತ್ತೂರು ಸರ್ಕಾರಿ ಪ್ರೌಢಶಾಲೆಯ ಹೇಮಂತ್ ದ್ವಿತೀಯ ಸ್ಥಾನವನ್ನು ಹಾಗೂ ಮಡಿಕೇರಿ ಸರ್ಕಾರಿ ಪ್ರೌಢಶಾಲೆಯ ಮನ್ವಿತ್ ತೃತೀಯ ಸ್ಥಾನವನ್ನು ಗಳಿಸಿದರು. ಚಿತ್ರಕಲಾ ಸ್ಪರ್ಧೆಯಲ್ಲಿ ಸಂತ ಮೈಕಲರ ಶಾಲೆಯ ಹಿತಾಶ್ರೀ ಪ್ರಥಮ ಸ್ಥಾನವನ್ನು, ಮಡಿಕೇರಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ವೈ.ಪಿ ಯಕ್ಷಿತ್ ದ್ವಿತೀಯ ಸ್ಥಾನವನ್ನು ,ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಜನೀಶ್ ತೃತೀಯ ಸ್ಥಾನವನ್ನು ಗಳಿಸಿದರು. ವಿಜೇತ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಮಡಿಕೇರಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್ ಪ್ರಶಸ್ತಿ ಪತ್ರಗಳನ್ನು ವಿತರಿಸಿದರು, ಶಿಕ್ಷಣ ಸಂಯೋಜಕ ರಾದ ಎಂ.ಹೆಚ್. ಹರೀಶ್, ಮಾರುತಿ ಅರೇರ, ಸಿಆರ್ ಪಿ ಮಂಜುಳ ಚಿತ್ರಾಪುರ, ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳು ಪಾಲ್ಗೊಂಡಿದ್ದರು.