ಮಡಿಕೇರಿ, ಫೆ. ೧೯: ಭಾರತೀಯ ಬೌದ್ಧ ಮಹಾಸಭಾದಿಂದ ತಾ. ೨೬ ರಂದು ಮೈಸೂರಿನ ಲಲಿತಮಹಲ್ ಅರಮನೆ ಮೈದಾನದಲ್ಲಿ ರಾಜ್ಯ ಮಟ್ಟದ ಬೌದ್ಧ ಮಹಾಸಮ್ಮೇಳನ ಆಯೋಜಿಸಲಾಗಿದೆ ಎಂದು ಭಾರತೀಯ ಬೌದ್ಧ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಂ.ಸಿ.ಶಿವರಾಜ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ ೯.೩೦ಕ್ಕೆ ಮೈಸೂರಿನ ಪುರಭವನದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಅವರ ಮೊಮ್ಮಗ ಡಾ.ಭೀಮ್ರಾವ್ ಯಶವಂತರಾವ್ ಅಂಬೇಡ್ಕರ್ ಮಾಲಾರ್ಪಣೆ ಮಾಡಲಿದ್ದಾರೆ. ಬಳಿಕ ಸಮತಾ ಸೈನಿಕ ದಳದ ಸದಸ್ಯರಿಂದ ಧಮ್ಮ ನಡಿಗೆಯು ಕಾರ್ಯಕ್ರಮದ ವೇದಿಕೆಯವರೆಗೆ ಸಾಗಲಿದೆ ಎಂದು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಬಿಕ್ಕುಗಳು ಹಾಗೂ ಡಾ.ಭೀಮ್ರಾವ್ ಮಾತನಾಡಲಿದ್ದಾರೆ. ಈ ಸಂದರ್ಭದಲ್ಲಿ ಬುದ್ಧ ಧಮ್ಮ ಕೃತಿಗಳ ಬಿಡುಗಡೆ ನಡೆಯಲಿದೆ. ರಾಜ್ಯಮಟ್ಟದ ಕಾರ್ಯಕ್ರಮ ಇದಾಗಿದ್ದು ೨೦ ಸಾವಿರದಿಂದ ೩೦ ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ. ಜಿಲ್ಲೆಯಿಂದಲೂ ಅಪಾರ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಶಿವಪ್ಪ ಇದ್ದರು.