ಮಡಿಕೇರಿ, ಫೆ. ೧೯: ಸಂಪಾಜೆ ಬಳಿಯ ಜೇಡ್ಲದಲ್ಲಿರುವ ಗೋಪಾಲಕೃಷ್ಣ ದೇವಕಿ ಪಶುಸಂಗೋಪನಾ ಕೇಂದ್ರದಲ್ಲಿ ತಾ. ೧೪ ರಂದು ಗೋ ಪ್ರೇಮಿ ದಿನವನ್ನು ಸಾಂಕೇತಿಕವಾಗಿ ಆಚರಿಸಲಾಯಿತು.
ಈ ಸಮಾರಂಭಕ್ಕೆ ಸಂಪಾಜೆ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳನ್ನು ವಿಶೇಷವಾಗಿ ಆಹ್ವಾನಿಸಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ ವಿದ್ಯಾರ್ಥಿಗಳು ಗೋವುಗಳಿಗೆ ಅರಿಶಿಣ, ಕುಂಕುಮ ಹಚ್ಚಿ ಅವುಗಳಿಗೆ ಹುಲ್ಲನ್ನು ತಿನ್ನಿಸಿ ಸಂಭ್ರಮಿಸಿದರು. ಗೋಶಾಲೆಯ ಕಾರ್ಯಾಧ್ಯಕ್ಷ ಡಾ.ರಾಜಾರಾಮ್ ಅವರು ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಡಿಕೇರಿ ಆಕಾಶವಾಣಿಯ ನಿರೂಪಕಿ, ಗೋಶಾಲೆಯ ಪ್ರಸಾರ ಮಾಧ್ಯಮ ವಿಭಾಗದ ಮಮತಾ ಶಾಸ್ತಿç ಹಾಗೂ ಕೋಶಾಧಿಕಾರಿಗಳಾದ ಈಶ್ವರ ಕುಮಾರ ಭಟ್ಟ ಅವರು ದೇಶಿ ಗೋವುಗಳ ಮಹತ್ವದ ಬಗ್ಗೆ ಮಾತನಾಡಿದರು. ಪ್ರಧಾನ ಕಾರ್ಯದರ್ಶಿಗಳಾದ ವಿಜಯಕೃಷ್ಣ ಕಬ್ಬಿನಹಿತ್ಲು ಗೋಸಾಕಣೆಯ ವಿವರಗಳನ್ನು ವಿದ್ಯಾರ್ಥಿಗಳಿಗೆ ನೀಡಿದರು. ವಿದ್ಯಾರ್ಥಿಗಳು ಗೋವಿನ ಗೀತೆಯನ್ನು ಹಾಡಿದರು.
ಈ ಸಂದರ್ಭ ಗೋಶಾಲೆಯ ಅಧ್ಯಕ್ಷ ಎನ್.ಟಿ.ರಾಜಗೋಪಾಲ್, ಕೊಡಗು ಹವ್ಯಕ ವಲಯದ ಅಧ್ಯಕ್ಷರಾದ ನಾರಾಯಣ ಮೂರ್ತಿ, ವಲಯದ ವಿವಿಧ ಪದಾಧಿಕಾರಿಗಳು, ಸಂಪಾಜೆ ಪದವಿ ಪೂರ್ವ ಕಾಲೇಜಿನ ಶಂಕರನಾರಾಯಣ ಭಟ್, ಪ್ರಾಂಶುಪಾಲೆ ಮಾಲತಿ ಹಾಗೂ ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು.