ಮಡಿಕೇರಿ, ಫೆ. ೧೭: ಶ್ರಮಜೀವಿಗಳಾದ ಹಮಾಲಿ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್ ತಲೆಹೊರೆ ಕಾರ್ಮಿಕರ ಸಂಘದ ಕೊಡಗು ಜಿಲ್ಲಾ ಸಮಿತಿ ಒತ್ತಾಯಿಸಿದೆ.

ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಸಮಿತಿಯ ಜಿಲ್ಲಾಧ್ಯಕ್ಷ ಪಿ.ಆರ್. ಭರತ್ ಹಾಗೂ ಪದಾಧಿ ಕಾರಿಗಳು ಹಮಾಲಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.

ಹಮಾಲಿ ಕಾರ್ಮಿಕರು ವ್ಯಾಪಾರ ವಹಿವಾಟು ಮತ್ತು ಜೀವನಾವಶ್ಯಕ ವಸ್ತುಗಳ ಸಾಗಾಣಿಕೆಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತಾರೆ. ಕನಿಷ್ಟ ಸೌಲಭ್ಯ ಮತ್ತು ಸಾಮಾಜಿಕ ಭದ್ರತೆಯಿಂದ ವಂಚಿತರಾದ ಶ್ರಮಜೀವಿಗಳ ಬೇಡಿಕೆಯನ್ನು ಸರ್ಕಾರ ಪರಿಗಣಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಸಹಕಾರ ಇಲಾಖೆ ಮೂಲಕ ಮರು ಜಾರಿಯಾಗುತ್ತಿರುವ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯ ಸೌಲಭ್ಯವನ್ನು ಉಚಿತವಾಗಿ ಎಲ್ಲಾ ಹಮಾಲಿ ಕಾರ್ಮಿಕರಿಗೆ ನೀಡಬೇಕು. ಈ ಹಿಂದೆ ಪ್ರಾರಂಭಿಸಲಾದ "ಕಾಯಕ ನಿಧಿ" ಯೋಜನೆ ಬಡ ಹಮಾಲಿ ಕಾರ್ಮಿಕರಿಗೆ ಅತ್ಯಂತ ಪ್ರಯೋಜನ ಕಾರಿಯಾಗಿದೆ.

ಸರಕಾರದಿಂದ ಮತ್ತು ಎಪಿಎಂಸಿಯಿAದ ಹಣಕಾಸು ಸಹಾಯ ಪಡೆದು ವೈದ್ಯಕೀಯ ಮರು ಪಾವತಿಸಿ ಯೋಜನೆ ಮುಂದುವರೆಸ ಬೇಕು, ೬೦ ವರ್ಷವಾದ ಹಮಾಲಿ ಕಾರ್ಮಿಕರಿಗೆ ಕನಿಷ್ಟ ೧ ಲಕ್ಷ ನಿವೃತ್ತಿ ಪರಿಹಾರ ನೀಡಬೇಕು, ರಾಜ್ಯದಲ್ಲಿ ಲೈಸೆನ್ಸ್ ಹೊಂದಿದ ವಸತಿ ರಹಿತ ಹಮಾಲಿ ಕಾರ್ಮಿಕರಿಗೆ ಉಚಿತ ವಸತಿ ಯೋಜನೆ ರೂಪಿಸಬೇಕು, ನೆನಗುದಿಗೆ ಬಿದ್ದರುವ ವಸತಿ ಯೋಜನೆಯನ್ನು ಜಾರಿ ಮಾಡಲು ಕ್ರಮ ಕೈಗೊಳ್ಳಬೇಕು, ಎಲ್ಲಾ ಎಪಿಎಂಸಿಗಳಲ್ಲಿ ಕನಿಷ್ಟ ವೇತನ ಜಾರಿಯಾಗುವಂತೆ ಮುತುವರ್ಜಿ ವಹಿಸಬೇಕು. ಸೇರಿದಂತೆ ಹಲವು ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು.

ಸಮಿತಿಯ ಉಪಾಧ್ಯಕ್ಷರುಗಳಾದ ಎ.ಕೆ. ಸುಲೈಮಾನ್, ಎಂ.ಆರ್. ರಾಮು ಹಾಗೂ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಶಾಜಿ ರಮೇಶ್ ಈ ಸಂದರ್ಭ ಹಾಜರಿದ್ದರು.