ಮುಳ್ಳೂರು, ಫೆ. ೧೬: ಶನಿವಾರಸಂತೆ ಶ್ರೀ ಮಂಜುನಾಥೇಶ್ವರ ಸ್ವಾಮಿ ಪಾದಯಾತ್ರೆ ಸಮಿತಿಯಿಂದ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ೨೫ನೇ ವರ್ಷದ ಪಾದಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬೆಳಿಗ್ಗೆ ೯ ಗಂಟೆಗೆ ಪಾದಯಾತ್ರೆ ಸಮಿತಿಯ ಪಾದಯಾತ್ರಿಗಳು ಪಟ್ಟಣದ ಮುಖ್ಯ ರಸ್ತೆಯಲ್ಲಿ ಶ್ರೀ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಪಾದಯಾತ್ರೆ ಸಮಿತಿಗೆ ೨೫ ವರ್ಷವಾಗಿರುವ ಹಿನ್ನೆಲೆಯಲ್ಲಿ ಕಲಶ ಹೊತ್ತ ಮಹಿಳೆಯರು ಗಣಪತಿ ದೇವಸ್ಥಾನದಿಂದ ಪಟ್ಟಣದ ಮುಖ್ಯ ರಸ್ತೆ ಮೂಲಕ ಕೆಆರ್ಸಿ ವೃತ್ತದಲ್ಲಿರುವ ಬನ್ನಿ ಮಂಟಪದವರಿಗೆ ಮೆರವಣಿಗೆ ಮೂಲಕ ಸಾಗಿ ಪಾದಯಾತ್ರಿಗಳಿಗೆ ಬೀಳ್ಕೊಟ್ಟರು.
ಶನಿವಾರಸಂತೆ, ಚಂಗಡಹಳ್ಳಿ, ಉಚ್ಚಂಗಿ, ವಣಗೂರು, ಕೂಡುರಸ್ತೆ, ಬಿಸ್ಲೆ, ಸುಬ್ರಹ್ಮಣ್ಯ ಮಾರ್ಗವಾಗಿ ಕಡಬ ರಸ್ತೆ, ಮಾರ್ದಾಳ ಇಂಜಿಲAಪಾಡಿ ಹೊಳೆ, ಕೊಕ್ಕಡ, ಸೌತಡ್ಕ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಮಾಡುತ್ತೇವೆ ಎಂದು ಪಾದಯಾತ್ರೆ ಸಮಿತಿಯ ಎ.ಡಿ. ಮೋಹನ್ ಕುಮಾರ್ ತಿಳಿಸಿದರು.