ಸೋಮವಾರಪೇಟೆ, ಫೆ. ೧೬: ಸಮೀಪದ ಯಡೂರು ಬಿ.ಟಿ.ಸಿ.ಜಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಅಗತ್ಯ ಉಪನ್ಯಾಸಕರುಗಳನ್ನು ನೇಮಕ ಮಾಡಲಾಗಿದ್ದು, ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ತಿಳಿಸಿದರು.
ಮುಂದಿನ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸುವ ಸಲುವಾಗಿ ಕಾಲೇಜಿನಲ್ಲಿ ದೊರಕುವ ಸೌಲಭ್ಯಗಳನ್ನು ಪರಿಚಯಿಸುವ ಕರಪತ್ರವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಪ್ರಸ್ತುತ ವಾಣಿಜ್ಯ ವಿಭಾಗಕ್ಕೆ ವಿವಿಧ ಭಾಗಗಳಿಂದ ಮೂರು ಮಂದಿ ಖಾಯಂ ಸಹ ಪ್ರಾಧ್ಯಾಪಕರನ್ನು ನೇಮಿಸಲಾಗಿದೆ. ಕೌನ್ಸಿಲಿಂಗ್ ಮೂಲಕ ಏಳು ಮಂದಿ ಉಪನ್ಯಾಸಕರನ್ನು ನಿಯೋಜಿಸಲಾಗಿದೆ. ಕಾಲೇಜಿನಲ್ಲಿ ಕ್ರೀಡೆಗೂ ಆದ್ಯತೆ ನೀಡಬೇಕೆಂಬ ಉದ್ದೇಶದಿಂದ ಒಬ್ಬರು ದೈಹಿಕ ಶಿಕ್ಷಣ ನಿರ್ದೇಶಕರನ್ನು ನೇಮಿಸಲಾಗಿದೆ. ಆ ಮೂಲಕ ಕಾಲೇಜಿನಲ್ಲಿ ಉತ್ತಮ ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ ಎಂದರು.
ಮುAದಿನ ಶೈಕ್ಷಣಿಕ ವರ್ಷದಿಂದ ಸ್ಥಳೀಯ ವಿದ್ಯಾರ್ಥಿ ಗಳು ಬೇರೆಡೆಗೆ ತೆರಳದೆ ಇಲ್ಲಿಯೇ ಶಿಕ್ಷಣ ಪಡೆಯಲು ಅನುಕೂಲ ವಾಗುವಂತಹ ವಾತಾವರಣ ನಿರ್ಮಿಸಲಾಗಿದೆ. ತಾಲೂಕಿನ ವಿವಿಧ ಪದವಿಪೂರ್ವ ಕಾಲೇಜು ಗಳಿಗೆ ತೆರಳಿ ಅಲ್ಲಿನ ವಿದ್ಯಾರ್ಥಿಗಳಿಗೆ ಈ ಕಾಲೇಜಿನ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡ ಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎಸ್. ಮಹೇಶ್, ಸದಸ್ಯರುಗಳಾದ ಶರತ್ ಚಂದ್ರ, ಹೆಚ್.ಎನ್. ತಂಗಮ್ಮ, ಪ್ರಾಂಶುಪಾಲೆ ಧನಲಕ್ಷ್ಮಿ, ಉಪನ್ಯಾಸಕಿ ಫೌಸಿಯ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸೋಮೇಶ್, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ಸುಮಾ ಸುದೀಪ್ ಅವರುಗಳು ಉಪಸ್ಥಿತರಿದ್ದರು.