(ಕೆ.ಎಂ ಇಸ್ಮಾಯಿಲ್ ಕಂಡಕರೆ)
ಮಡಿಕೇರಿ, ಫೆ. ೧೫: ವಿಭಿನ್ನ ಸಂಸ್ಕೃತಿ, ಆಚಾರ-ವಿಚಾರಗಳನ್ನು ಹೊಂದಿರುವ ಕೊಡವರ ಅಭಿವೃದ್ಧಿಗಾಗಿ ಪ್ರತ್ಯೇಕ "ಕೊಡವ ಅಭಿವೃದ್ಧಿ ನಿಗಮ" ಸ್ಥಾಪನೆಗೆ ಕಳೆದ ಹಲವು ವರ್ಷಗಳಿಂದ ಕೊಡವ ಜನಾಂಗ ಸರ್ಕಾರಕ್ಕೆ ಒತ್ತಾಯ ಮಾಡುತ್ತಾ ಬಂದಿದೆ.
ಕಳೆದ ವರ್ಷ ಬಜೆಟ್ನಲ್ಲಿ ಕೊಡವ ಅಭಿವೃದ್ಧಿ ನಿಗಮ ಘೋಷಣೆಯಾಗುತ್ತೆ ಎಂಬ ನಿರೀಕ್ಷೆ ಇತ್ತು.
ಆದರೆ ಕೊಡವ ಅಭಿವೃದ್ಧಿ ನಿಗಮ ಘೋಷಣೆ ಬದಲು ಕೊಡವ ಜನಾಂಗದ ಅಭಿವೃದ್ಧಿಗೆ ಹತ್ತು ಕೋಟಿ ರೂ. ಬಜೆಟ್ನಲ್ಲಿ ಘೋಷಣೆ ಮಾಡಲಾಗಿತ್ತು.
ಇದೀಗ ಮತ್ತೆ ಕೊಡವ ಅಭಿವೃದ್ಧಿ ನಿಗಮ ಘೋಷಣೆ ಮಾಡಬೇಕೆಂಬ ಒತ್ತಾಯ ಕೇಳಿಬರುತ್ತಿದೆ.
ಕಳೆದ ಬಾರಿ ಯುನೈಟೆಡ್ ಕೊಡವ ಆರ್ಗನೈಸೇಶನ್ (ಯುಕೋ) ಸಂಘಟನೆಯ ಪ್ರಮುಖರು ಈ ಹಿಂದೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿರವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.
ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯ ಮಾಡಲಾಗಿತ್ತು.
ದಶಕಗಳ ಕನಸು ನನಸಾಗುತ್ತಾ!: ಕಳೆದ ಹಲವಾರು ವರ್ಷಗಳ ಬೇಡಿಕೆಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಸರ್ಕಾರ ಮುಂದಾಗಿಲ್ಲ.
ತುರ್ತು ಸಂದರ್ಭದಲ್ಲಿ ಜಿಲ್ಲೆಯ ಜನರು ಮಂಗಳೂರು ಹಾಗೂ ಮೈಸೂರು ಜಿಲ್ಲೆಗಳ ಆಸ್ಪತ್ರೆಗಳನ್ನು ಅವಲಂಬಿಸಿದ್ದಾರೆ.
ಈ ಹಿಂದೆ ಕೊಡಗು ಜಿಲ್ಲೆಗೆ ಆರೋಗ್ಯ ಸಚಿವರಾಗಿದ್ದ ಶ್ರೀರಾಮುಲು ಭೇಟಿ ನೀಡಿದ್ದಾಗ. ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ನಂತರದ ದಿನಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ಗಮನಕ್ಕೆ ಬಂದಿಲ್ಲ ಎಂದು ಸದನದಲ್ಲಿ ಕೈತೊಳೆದುಕೊಂಡಿದ್ದರು.
ಡಿಸೆAಬರ್ ತಿಂಗಳಲ್ಲಿ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಆರೋಗ್ಯ ಸಚಿವ ಡಾ ಸುಧಾಕರ್, ಕೊಡಗು ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ರಸ್ತೆ ನಿರ್ಮಾಣಕ್ಕೆ ವಿಶೇಷ ಪ್ಯಾಕೇಜ್ ಘೋಷಣೆಯಾಗುತ್ತಾ?
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಕೊಡಗು ಜಿಲ್ಲೆಯ ರಸ್ತೆಗಳ ಅಭಿವೃದ್ಧಿಗೆ ‘‘೫೦ ಕೋಟಿ ರೂ ವಿಶೇಷ ಪ್ಯಾಕೇಜ್’’ ಘೋಷಣೆ ಮಾಡಿದ್ದರು.
ಈ ವರ್ಷದ ರಾಜ್ಯ ಮುಂಗಡ ಪತ್ರದಲ್ಲಿ ಜಿಲ್ಲೆಯ ಗ್ರಾಮೀಣ ಭಾಗದ ರಸ್ತೆಗಳಿಗೆ ನೂರು ಕೋಟಿ ರೂ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಒತ್ತಾಯ ಕೇಳಿಬರುತ್ತಿದೆ.
ಕೊಡಗು ಕೃಷಿ ಪ್ರಧಾನ ಜಿಲ್ಲೆಯಾಗಿದೆ. ಕಾಫಿ, ಮೆಣಸು ಮುಖ್ಯ ಬೆಳೆಯಾಗಿದೆ.
ಆದರೆ ಕಳೆದ ಐದಾರು ವರ್ಷಗಳಿಂದ ಅತಿವೃಷ್ಟಿ, ಅಕಾಲಿಕ ಮಳೆ, ಹವಾಮಾನ ವೈಪರೀತ್ಯ, ಪ್ರಕೃತಿ ವಿಕೋಪ, ವನ್ಯ ಪ್ರಾಣಿಗಳ ಹಾವಳಿ, ಬೆಲೆ ಕುಸಿತಕ್ಕೆ ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ.
ಈ ಬಾರಿಯ ಬಜೆಟ್ನಲ್ಲಿ ಕಾಫಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ಒತ್ತಾಯ ಕೇಳಿಬರುತ್ತಿದೆ.
ಕಾಫಿ ಬೆಳೆಗಾರರು ಬಹು ವರ್ಷಗಳ ಬೇಡಿಕೆಯಾಗಿರುವ ೧೦ ಹೆಚ್ಪಿ ತನಕದ ಪಂಪ್ ಸೆಟ್ ಗೆ ಉಚಿತ ವಿದ್ಯುತ್ ಘೋಷಣೆಯಾಗುವ ನಿರೀಕ್ಷೆಯಲ್ಲಿ ಕಾಫಿ ಬೆಳೆಗಾರರು ಇದ್ದಾರೆ.
ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಇಂಧನ ಖಾತೆ ಸಚಿವ ಸುನಿಲ್ ಕುಮಾರ್ ಘೋಷಣೆ ಮಾಡಿದ್ದರು. ಆದರೆ ಇದುವರೆಗೆ ಉಚಿತ ವಿದ್ಯುತ್ ಯೋಜನೆ ಜಾರಿಗೆ ಬರಲಿಲ್ಲ. ಈ ಬಾರಿಯ ಬಜೆಟ್ನಲ್ಲಿ ೧೦ ಹೆಚ್.ಪಿ ಪಂಪ್ಸೆಟ್ಗೆ ಉಚಿತ ವಿದ್ಯುತ್ ಘೋಷಣೆಯಾಗುವ ಸಾಧ್ಯತೆ ಇದೆ.
ಸಾಲ ಮನ್ನಾ ಮಾಡಲು ಒತ್ತಾಯ: ಕಾಫಿ ಬೆಳೆಯನ್ನು ನಂಬಿ ಬದುಕುವ ಅತೀ ಹೆಚ್ಚು ಸಣ್ಣ ಬೆಳೆಗಾರರು ಜಿಲ್ಲೆಯಲ್ಲಿ ಇದ್ದಾರೆ.
ಒಂದೆಡೆ ಬೆಲೆ ಕುಸಿತ, ಮತ್ತೊಂದೆಡೆ ನಿರ್ವಹಣಾ ವೆಚ್ಚ ಅಧಿಕವಾಗಿದೆ.
ಇದರ ಮಧ್ಯೆ ಅಕಾಲಿಕ ಮಳೆಗೆ ತುತ್ತಾಗಿ ಕಾಫಿ ಬೆಳೆಯನ್ನು ಕೈ ಚೆಲ್ಲಿ ಬೆಳೆಗಾರರು ನಷ್ಟ ಅನುಭವಿಸಿದ್ದಾರೆ.
ಕಾಫಿ ಬೆಳೆಗಾರರ ಒಂದು ಲಕ್ಷವರೆಗಿನ ಸಾಲಮನ್ನಾ ಮಾಡಲು ಬೆಳೆಗಾರರು ಒತ್ತಾಯ ಮಾಡುತ್ತಿದ್ದಾರೆ.
ಅದಲ್ಲದೇ ವನ್ಯ ಪ್ರಾಣಿಗಳ ಹಾವಳಿಯಿಂದ ಬೆಳೆಗಾರರು ಬೆಳೆದ ಬೆಳೆಗಳು ಕಾಡು ಪ್ರಾಣಿಗಳ ಪಾಲಾಗುತ್ತಿದೆ. ಕಾಡು ಪ್ರಾಣಿಗಳಿಂದ ಬೆಳೆ ನಷ್ಟ ಹೊಂದುವ ಬೆಳೆಗಾರರಿಗೆ ಪರಿಹಾರವನ್ನು ಹೆಚ್ಚಳ ಮಾಡಲು ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂಬ ಕೂಗು ಕೇಳಿಬರುತ್ತಿದೆ.