ಮಡಿಕೇರಿ, ಫೆ. ೧೬: ಹಿಂದೂ ಕ್ರಿಕೆಟ್ ಕ್ಲಬ್ ವತಿಯಿಂದ ಮಾ. ೪ ಮತ್ತು ೫ ರಂದು ನಗರದ ಜನರಲ್ ಕೆ.ಎಸ್. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ೩ನೇ ವರ್ಷದ ಹಿಂದೂ ಕ್ರಿಕೆಟ್ ಕಪ್-೨೦೨೩ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕ್ಲಬ್ ಸದಸ್ಯ ವಿನಯ್ ಕುಮಾರ್, ವಿವಿಧ ಸಮಾಜಗಳು ತಮ್ಮ ಸಮೂಹಕ್ಕೆ ಸೀಮಿತವಾದ ಪಂದ್ಯಾವಳಿಗಳನ್ನು ಆಯೋಜಿಸಿಕೊಂಡು ಬರುತ್ತಿವೆ. ಆದರೆ, ಹಿಂದೂ ಕ್ರಿಕೆಟ್ ಕ್ಲಬ್ ವತಿಯಿಂದ ಹಿಂದೂ ಸಮಾಜದ ಎಲ್ಲರನ್ನೂ ಸಂಘಟಿಸುವ ಚಿಂತನೆಯಡಿ ಹಿಂದೂ ಕ್ರಿಕೆಟ್ ಕಪ್ ಆಯೋಜಿಸಲಾಗುತ್ತಿದೆ. ಪಂದ್ಯಾವಳಿಯಲ್ಲಿ ರಾಜ್ಯವ್ಯಾಪ್ತಿಯ ೪೦ ರಿಂದ ೪೫ ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇರುವುದಾಗಿ ತಿಳಿಸಿದರು.

ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಆಟಗಾರರು ತಮ್ಮ ಗುರುತಿನ ಐಡಿ ಕಾರ್ಡ್ ಅನ್ನು ಹಾಜರುಪಡಿಸುವುದು ಕಡ್ಡಾಯವಾಗಿದ್ದು, ಪಂದ್ಯಾವಳಿ ನಾಕ್ ಔಟ್ ಮಾದರಿಯಲ್ಲಿ ನಡೆಯಲಿದೆ. ಆಸಕ್ತ ತಂಡಗಳು ತಾ. ೨೮ ರೊಳಗೆ ಹೆಸರು ನೋಂದಾಯಿಸಿ ಕೊಳ್ಳಬೇಕೆಂದು ಹೇಳಿದರು.

ಪಂದ್ಯಾವಳಿ ವಿಜೇತರಿಗೆ ನೀಡಲು ಅತ್ಯಂತ ವಿಶಿಷ್ಟವಾದ ಟ್ರೋಫಿಗಳನ್ನು ಸಿದ್ಧಪಡಿಸಲಾಗಿದೆ. ವಿಜೇತರಿಗೆ ರೂ. ೫೫,೫೫೫, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ರೂ. ೩೩,೩೩೩, ತೃತೀಯ ರೂ. ೧೧,೧೧೧ ನಾಲ್ಕನೇ ಬಹುಮಾನವಾಗಿ ರೂ. ೫,೫೫೫ ನಗದು ಬಹುಮಾನವನ್ನು ನೀಡಲಾಗುತ್ತದೆ.

ಪಂದ್ಯಾವಳಿಯ ಕುರಿತ ಹೆಚ್ಚಿನ ಮಾಹಿತಿಗಾಗಿ ಮೊ.೯೮೮೦೪೯೦೫೩೬, ಮೊ. ೯೯೦೦೬೧೨೬೬೪ ಅನ್ನು ಸಂಪರ್ಕಿಸಬಹುದೆAದು ತಿಳಿಸಿದರು.

ಗೋಷ್ಠಿಯಲ್ಲಿ ಹಿಂದೂ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಕೆ.ಆರ್. ಪವನ್, ಸದಸ್ಯರಾದ ಬಿ.ಎಸ್. ಸಂದೀಪ್ ಪೂಜಾರಿ, ಬಿ.ಡಿ. ಭರತ್ ಕುಮಾರ್, ರಕ್ಷಿತ್ ಉಪಸ್ಥಿತರಿದ್ದರು.