ಮಡಿಕೇರಿ, ಫೆ. ೧೫: ಕೊಡಗು ಜಿಲ್ಲೆಯ ಜಮ್ಮಾ ಬಾಣೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ವಿಶೇಷ ಹಕ್ಕಿನ ಜಾಗವನ್ನು ಗುತ್ತಿಗೆ ನೀಡುವ ವಿಚಾರ ಗೊಂದಲ ಸೃಷ್ಟಿಸಿದೆ. ಶಾಸಕರು ಈ ಬಗ್ಗೆ ಪ್ರತಿಕ್ರಿಯಿಸಿದ್ದು ‘ಈ ರೀತಿಯ ಪ್ರಸ್ತಾಪವೇ ಇಲ್ಲ ಯಾವುದೇ ಆತಂಕ ಬೇಡ’ ಎಂದು ಸ್ಪಷ್ಟಪಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಮ್ಮಾ ಕಾಣೆ, ಬಾಣೆ ಜಮೀನು, ಉತ್ತರ ಕನ್ನಡ ಜಿಲ್ಲೆಯಲ್ಲಿ ಬೆಟ್ಟ ಹಾಡಿ, ಮೈಸೂರು ಪ್ರಾಂತ್ಯದಲ್ಲಿ ಕಾಣೆ, ಸೊಪ್ಪಿನಬೆಟ್ಟ, ಕೊಡಗು ಜಿಲ್ಲೆಯಲ್ಲಿ ಜಮ್ಮಾ ಬಾಣೆ ಜಮೀನುಗಳನ್ನು ಅಧಿಭೋಗದಾರರಿಗೆ ಮಂಜೂರು ಮಾಡುವ ಸಂಬAಧ ಕರ್ನಾಟಕ ಭೂ ಕಂದಾಯ ಕಾಯ್ದೆ ೧೯೬೪ರ ಕಲಂ ೭೯(೨)ಕ್ಕೆ ತಿದ್ದುಪಡಿ ತರಲು ರಾಜ್ಯ ಸಚಿವ ಸಂಪುಟ ಉಪ ಸಮಿತಿ ಸೂಚಿಸಿದೆ ಎನ್ನಲಾಗಿರುವ ವಿಚಾರ ಜಿಲ್ಲೆಯಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಇದರ ಪರ-ವಿರೋಧ ಚರ್ಚೆಗಳು ಪ್ರಾರಂಭವಾಗಿವೆ. ಈ ರೀತಿಯ ಗೊಂದಲಗಳು ಸೃಷ್ಟಿಯಾದರೂ ಕಂದಾಯ ಸಚಿವರು, ಕೊಡಗಿನ ಜನಪ್ರತಿನಿಧಿಗಳು ಸ್ಪಷ್ಟನೆ ನೀಡದ ಹಿನ್ನೆಲೆ ಈ ವಿಚಾರ ಮತ್ತಷ್ಟು ವಿವಾದಕ್ಕೆ ಒಳಗಾಗಿತ್ತು.
ಈ ನಿಟ್ಟಿನಲ್ಲಿ ‘ಶಕ್ತಿ’ ಕೊಡಗಿನ ಶಾಸಕರನ್ನು ಪ್ರಶ್ನಿಸಿದ್ದು, ಈ ರೀತಿಯ ಪ್ರಸ್ತಾಪವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದು, ಗೊಂದಲಕ್ಕೆ ಒಳಗಾಗದಂತೆ ಅಭಯ ನೀಡಿದ್ದಾರೆ.
ಪ್ರಸ್ತಾಪವೇ ಇಲ್ಲ – ಕೆ.ಜಿ. ಬೋಪಯ್ಯ
ಜಮ್ಮಾ ಬಾಣೆ ಜಾಗ ಗುತ್ತಿಗೆ ವಿಚಾರ ಎಂಬುದು ತಪ್ಪು ಮಾಹಿತಿ. ಯಾವುದೇ ಕಾರಣಕ್ಕೂ ಈ ರೀತಿಯ ಪ್ರಸ್ತಾಪ ಸರಕಾರದ ಮುಂದಿಲ್ಲ. ಸರಕಾರಿ ಜಮೀನನ್ನು ಕೆಲವೊಂದು ಷರತ್ತಿನೊಂದಿಗೆ ೩೦ ವರ್ಷಕ್ಕೆ ಗುತ್ತಿಗೆ ನೀಡುವ ಪ್ರಸ್ತಾಪವಿದ್ದು, ಇದು ಭೂಕಂದಾಯ ಕಾಯ್ದೆಯ ತಿದ್ದುಪಡಿಯಲ್ಲಿ ಸ್ಪಷ್ಟವಾಗಿದೆ. ರಾಜ್ಯದ ವಿವಿಧೆಡೆಗಳಲ್ಲಿ ವಿಶೇಷ ಹಕ್ಕಿನ ಜಾಗವನ್ನು ಗುತ್ತಿಗೆ ನೀಡುವ ಸಂಬAಧ ಚರ್ಚೆಯಲ್ಲಿದೆ. ಬೇರೆ ಜಿಲ್ಲೆಯ ವಿಶೇಷ ಹಕ್ಕಿನ ಜಾಗದ ಆರ್.ಟಿ.ಸಿ.ಯಲ್ಲಿ ‘ಸರಕಾರ’ ಎಂದು ನಮೂದಾಗಿದೆ. ಜಮ್ಮಾ ಜಾಗದ ಆರ್.ಟಿ.ಸಿ.ಯಲ್ಲಿ ಕುಟುಂಬಸ್ಥರ ಅಥವಾ ಪಟ್ಟೇದಾರರ ಹೆಸರು ನಮೂದಾಗಿರುತ್ತದೆ. ರಾಜಕೀಯಕ್ಕಾಗಿ ಈ ರೀತಿ ಗೊಂದಲ ಸೃಷ್ಟಿಸಿ ಪಕ್ಷದ ಹೆಸರಿಗೆ ಚ್ಯುತಿ ತರಲು ವಿರೋಧಿಗಳು ಮುಂದಾಗಿದ್ದಾರೆ. ಜಮ್ಮಾ, ಬಾಣೆ ಪ್ರಸ್ತಾಪವಿದ್ದಿದ್ದರೆ ಉಪಸಮಿತಿಯಲ್ಲಿ ಜಿಲ್ಲೆಯ ಶಾಸಕರನ್ನು ಸೇರಿಸಬೇಕಿತ್ತು. ನಾವು ಸಮಿತಿಯಲ್ಲಿಲ್ಲ. ಈ ರೀತಿ ಪ್ರಸ್ತಾಪವೇ ಇಲ್ಲ. ಯಾರೂ ಗಾಬರಿಯಾಗುವ ಅವಶ್ಯಕತೆ ಇಲ್ಲ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಮಾಹಿತಿ ನೀಡಿದ್ದಾರೆ.
ಅಧಿಕಾರಿಗಳ ತಪ್ಪಿನಿಂದ ಗೊಂದಲ - ರಂಜನ್
ಅಧಿಕಾರಿಗಳ ತಪ್ಪಿನಿಂದ ಈ ಗೊಂದಲ ಸೃಷ್ಟಿಯಾಗಿದೆ. ಜಮ್ಮಾ ಜಾಗವನ್ನು ಗುತ್ತಿಗೆ ನೀಡುವ ವಿಚಾರದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅಧಿಕಾರಿಗಳ ತಪ್ಪಿನಿಂದ ಸದನದಲ್ಲಿ ಶಾಸಕರೊಬ್ಬರು ಕೇಳಿದ ಪ್ರಶ್ನೆಗೆ ನೀಡಿದ ಉತ್ತರದಲ್ಲಿ ‘ಜಮ್ಮಾ’ ಎಂದು ಸೇರಿಸಲಾಗಿದೆ. ಸರಕಾರದ ಮುಂದೆ ಈ ಚಿಂತನೆ ಇಲ್ಲ. ಜಿಲ್ಲೆಯ ಜನ ತಪ್ಪು ಮಾಹಿತಿಗೆ ಕಿವಿಗೊಡಬಾರದು. ಗೊಂದಲ ಹುಟ್ಟಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕೆಲವರು ಈ ರೀತಿ ಮಾಡುತ್ತಿದ್ದಾರೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸ್ಪಷ್ಟಪಡಿಸಿದ್ದಾರೆ.
ತಪ್ಪು ಮಾಹಿತಿ - ಸುಜಾ
ಜಮ್ಮಾ ಜಾಗ ಗುತ್ತಿಗೆ ಎಂಬ ವಿಚಾರ ತಪ್ಪು ಮಾಹಿತಿಯಾಗಿದ್ದು, ಸರಕಾರದ ಮುಂದೆ ಈ ರೀತಿಯ ಯಾವುದೇ ಪ್ರಸ್ತಾಪಗಳಿಲ್ಲ. ಇದು ಕೇವಲ ಊಹಾಪೋಹಗಳಾಗಿದ್ದು, ಯಾರು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ವಿಧಾನಪರಿಷತ್ತು ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಹೇಳಿದ್ದಾರೆ.
ಪ್ರಶ್ನಿಸಲು ಅವಕಾಶವಿದೆ – ಕವನ್
ಉಚ್ಛ ನ್ಯಾಯಾಲಯದ ತೀರ್ಪಿನ ಅನ್ವಯ ಕಂದಾಯ ನಿಗದಿ ಯಾಗದ ಜಮ್ಮಾಜಾಗ ಸರಕಾರದ ಸ್ವತ್ತಾಗಿರುತ್ತದೆ ಎಂದು ಉಲ್ಲೇಖಿಸ ಲಾಗಿದೆ. ಜಮ್ಮಾಬಾಣೆ ಜಾಗ ಸರಕಾರ ದಿಂದ ವಿಶೇಷ ಹಕ್ಕಿನಿಂದ ದೊರೆತಿ ರುವ ಹಿನ್ನೆಲೆ ಜಮ್ಮಾಬಾಣೆಯನ್ನು ನಾವು ಮುಕ್ತವಾಗಿ ಕೃಷಿ ಚಟುವಟಿಕೆಗೆ ಬಳಸಿಕೊಳ್ಳಬಹುದಾಗಿದೆ. ಇದನ್ನು ಭೋಗ್ಯ ನೀಡುವ ಅಥವಾ ಮಾರಾಟ ಮಾಡುವಂತಿಲ್ಲ. ಕಂದಾಯ ನಿಗದಿ ಯಾದರೆ ಮಾಲೀಕತ್ವ ದೊರೆಯುತ್ತದೆ. ಅದಾದ ಬಳಿಕ ವಾಣಿಜ್ಯ ಉದ್ದೇಶಕ್ಕೂ ಪರಿವರ್ತನೆಗೊಳಿಸಬಹುದು. ಹಿಡುವಳಿದಾರರು ಹೊರತುಪಡಿಸಿ ಬೇರೆಯವರು ಜಮ್ಮಾ ಜಾಗವನ್ನು ಒತ್ತುವರಿ ಮಾಡಿದ್ದಲ್ಲಿ ಅಂತ ಪ್ರಕರಣವನ್ನು ಪ್ರಶ್ನಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಮಡಿಕೇರಿಯ ವಕೀಲ ಕಾರೇರ ಕವನ್ ತಿಳಿಸಿದ್ದಾರೆ.