ಸೋಮವಾರಪೇಟೆ,ಫೆ.೧೬: ತೊರೆನೂರು ಗ್ರಾ.ಪಂ. ವ್ಯಾಪ್ತಿಯ ಅರಸಿನಕುಪ್ಪೆ ಗ್ರಾಮದಲ್ಲಿರುವ ಶ್ರೀ ಮಂಜುನಾಥಸ್ವಾಮಿ ಕ್ಷೇತ್ರದಲ್ಲಿ ಮಹಾಶಿವರಾತ್ರಿ ಜಾತ್ರೋತ್ಸವ ಅಂಗವಾಗಿ ದೇವರಿಗೆ ೧೧೦೮ ಎಳನೀರು ಅಭಿಷೇಕ ಸೇರಿದಂತೆ ಇತರ ಪೂಜಾ ಕೈಂಕರ್ಯಗಳು ನಡೆಯಲಿವೆ ಎಂದು ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎನ್.ಎಂ. ಮುತ್ತಪ್ಪ ತಿಳಿಸಿದ್ದಾರೆ.
ತಾ. ೧೮ರಂದು ಬೆಳಿಗ್ಗೆ ೫ ಗಂಟೆಗೆ ಗಣಪತಿ ಹೋಮದೊಂದಿಗೆ ಶಿವರಾತ್ರಿ ಮಹೋತ್ಸವಕ್ಕೆ ಚಾಲನೆ ದೊರೆಯಲಿದ್ದು, ನಂತರ ಅಷ್ಟಯಾಮ ಪೂಜೆ, ರುದ್ರ ಹೋಮ, ತೀರ್ಥಸ್ನಾನ, ಪ್ರಸಾದ ವಿತರಣೆ ಜರುಗಲಿದೆ. ಬೆಳಿಗ್ಗೆ ೬ ಗಂಟೆಯಿAದ ವಿವಿಧ ಯಾಮಗಳಲ್ಲಿ ಪೂಜೆ ನಡೆಯಲಿದ್ದು, ದೇವಾಲಯದಲ್ಲಿ ಹಾಲಿನ ಅಭಿಷೇಕ, ಎಳನೀರು ಅಭಿಷೇಕ, ಕಬ್ಬಿನ ಹಾಲಿನ ಅಭಿಷೇಕ, ಕಲಶಾಭಿಷೇಕ, ಪಂಚಾಮೃತ ಅಭಿಷೇಕ, ಜೇನುತುಪ್ಪದ ಅಭಿಷೇಕ, ಭಸ್ಮಾಭಿಷೇಕ ನೆರವೇರಲಿದೆ. ತಾ. ೧೯ರಂದು ಬೆಳಿಗ್ಗೆ ೭ ಗಂಟೆಯಿAದ ರುದ್ರಹೋಮ ಆರಂಭವಾಗಲಿದ್ದು, ೮.೩೦ಕ್ಕೆ ಪೂರ್ಣಾಹುತಿ, ಕಲಶಾಭಿಷೇಕ, ಮಹಾಪೂಜೆ, ಮಹಾಮಂಗಳಾರತಿ, ತೀರ್ಥಸ್ನಾನ, ದೇವರ ಪ್ರಸಾದ ವಿತರಣೆ ಸೇರಿದಂತೆ ಇತರ ಪೂಜಾ ಕೈಂಕರ್ಯಗಳು, ದೇವಾಲಯದ ಪ್ರಧಾನ ಗುರುಗಳಾದ ಶ್ರೀರಾಜೇಶ್ನಾಥ್ಜೀ ಅವರ ಮಾರ್ಗದರ್ಶನದಲ್ಲಿ ನಡೆಯಲಿದೆ. ತಾ. ೧೮ರ ರಾತ್ರಿ ಭಜನಾ ಕಾರ್ಯಕ್ರಮ ಜರುಗಲಿದೆ ಎಂದು ಮುತ್ತಪ್ಪ ತಿಳಿಸಿದ್ದಾರೆ.