ವರದಿ: ಕೆ.ಎಸ್. ಮೂರ್ತಿ
ಕಣಿವೆ, ಫೆ. ೧೫: ಕೊಡಗು ಜಿಲ್ಲೆಯಲ್ಲಿನ ಹೆಚ್ಚು ಜನಸಾಂದ್ರತೆಯ ತಾಲೂಕು ಕೇಂದ್ರ ಕುಶಾಲನಗರ ಪಟ್ಟಣದ ಪುರಸಭಾ ವ್ಯಾಪ್ತಿಯ ಸರಿಸುಮಾರು ೨೯ ಸಾವಿರದಷ್ಟು ಜನಸಂಖ್ಯೆ ಇರುವ ನಿವಾಸಿಗಳಿಗೆ ಹಳೇ ಕೂಡಿಗೆ ಬಳಿ ಇರುವ ಕಾವೇರಿ ಹಾಗೂ ಹಾರಂಗಿ ನದಿಗಳ ಸಂಗಮದಿAದ ಕುಡಿಯುವ ನೀರನ್ನು ಪೂರೈಸಲು ಅಂದಾಜು ೩೫ ಕೋಟಿ ವೆಚ್ಚದ ಯೋಜನೆ ಸಿದ್ಧಗೊಂಡಿದೆ. ಇದರಿಂದಾಗಿ ಈ ಹಿಂದೆ ೮೦ ಕೋಟಿ ವೆಚ್ಚದಲ್ಲಿ ಸಿದ್ಧಪಡಿಸಿದ್ದ ಹುಲುಗುಂದದ ಬಳಿ ಇರುವ ಹಾರಂಗಿ ಜಲಾಶಯದ ಯೋಜನೆಯನ್ನು ಸರ್ಕಾರ ಕೈಬಿಟ್ಟಿದೆ ಎನ್ನಲಾಗುತ್ತಿದೆ.
ಕೊಡಗು ಜಿಲ್ಲೆಯ ಇತರೇ ನಗರ ಪ್ರದೇಶಗಳ ಪೈಕಿ ಅತ್ಯಂತ ಹೆಚ್ಚು ಜನಸಂಖ್ಯಾ ದಟ್ಟಣೆಯೊಂದಿಗೆ ವಿಸ್ತಾರವಾಗಿ ಬೆಳೆಯುತ್ತಿರುವ ಕುಶಾಲನಗರ ಪಟ್ಟಣದ ಮುಂದಿನ ೩೦ ವರ್ಷಗಳ ಜನಸಂಖ್ಯೆಯ ದ್ವಿಗುಣವನ್ನು (೬೦ ಸಾವಿರ ಜನಸಂಖ್ಯೆ) ಅಂದಾಜಿಸಿ ಈ ಯೋಜನೆ ರೂಪಿಸಲಾಗಿದೆ.
ಪ್ರಸ್ತುತ ಕುಶಾಲನಗರ ಪುರಸಭಾ ವ್ಯಾಪ್ತಿಯಲ್ಲಿ ೨೫ ರಿಂದ ೨೯ ಸಾವಿರ ಜನಸಂಖ್ಯೆ ಇದ್ದು ಇಷ್ಟೂ ಮಂದಿಗೆ ಕುಶಾಲನಗರ ಪಟ್ಟಣದ ಬೈಚನಹಳ್ಳಿಯ ಕಾವೇರಿ ನದಿಯಿಂದ ನೀರನ್ನು ಮೇಲೆತ್ತಿ ಜಲಮಂಡಳಿಯ ಬಳಿಯಿರುವ ಜಲಾಗಾರದಲ್ಲಿ ಶುದ್ಧೀಕರಿಸಿ ಅಲ್ಲಿಂದ ನಿವಾಸಿಗಳಿಗೆ ಪೂರೈಸಲಾಗುತ್ತಿದೆ.
ಆದರೆ, ಪ್ರತೀ ವರ್ಷದ ಏಪ್ರಿಲ್, ಮೇ ಹಾಗೂ ಜೂನ್ ತಿಂಗಳಿನಲ್ಲಿ ಬಿಸಿಲ ತಾಪಮಾನ ಹೆಚ್ಚಾದೊಡನೆ ಕಾವೇರಿ ನದಿಯಲ್ಲಿ ನೀರಿನ ಹರಿವು ಕ್ಷೀಣವಾಗುವುದರಿಂದ ನಿವಾಸಿಗಳಿಗೆ ಕುಡಿಯುವ ನೀರೊದಗಿಸಲು ಮರಳು ಚೀಲಗಳಿಂದ ಕಟ್ಟೆಯನ್ನು ಕಟ್ಟಿ ಕುಡಿವ ನೀರನ್ನು ಯಂತ್ರಾಗಾರದಲ್ಲಿ ಮೇಲೆತ್ತಲಾಗುತ್ತದೆ. ಈ ಸಮಸ್ಯೆಯಿಂದ ಶಾಶ್ವತವಾಗಿ ಹೊರಬರುವ ಯೋಜನೆ ರೂಪಿಸಿರುವ ಜಲಮಂಡಳಿ ಶಾಶ್ವತ ಯೋಜನೆ ರೂಪಿಸಲು ಮುಂದಾಗಿರುವುದು ಕುಶಾಲನಗರದ ಜನತೆಗೆ ತೀವ್ರ ಖುಷಿ ತಂದಿದೆ.
ಕೇAದ್ರ ಸರ್ಕಾರದ ಜಲಜೀವನ ಯೋಜನೆಯನ್ವಯ ಒಂದು ಲಕ್ಷ ಜನಸಂಖ್ಯೆಗಿAತ ಕಡಿಮೆ ಇರುವ ನಗರ ಪಟ್ಟಣ ಪ್ರದೇಶಗಳಿಗೆ ‘ಅಮೃತ್-೨’ ಎಂಬ ಯೋಜನೆಯನ್ನು ಜಾರಿಗೊಳಿ ಸಿರುವ ಇಲಾಖೆ ಹಳೆ ಕೂಡಿಗೆಯ ಕಾವೇರಿ ನದಿಯ ಸಂಗಮದಿAದ ಕುಶಾಲನಗರ ಪುರಸಭಾ ವ್ಯಾಪ್ತಿಯ ವಾಸಿಗಳಿಗೆ ಕುಡಿಯುವ ನೀರೊದಗಿಸಲು ೩೫ ಕೋಟಿ ರೂ. ವೆಚ್ಚದಲ್ಲಿ ವಿನೂತನ ಯೋಜನೆಯ ಅನುಷ್ಠಾನಕ್ಕೆ ಮುಂದಾಗಿದೆ.
ಪ್ರತಿಯೊಬ್ಬರಿಗೂ ನೀರು: ದೇಶದ ಯಾವುದೇ ಪ್ರಜೆ ಕುಡಿಯುವ ನೀರಿಗೆ ತತ್ವಾರ ಪಡಬಾರದು. ಹಾಗಾಗಿ ಪ್ರತಿಯೊಬ್ಬರಿಗೂ ನೀರನ್ನು ಪೂರೈಸಲೇ ಬೇಕೆಂಬ ಧ್ಯೇಯ ಘೋಷದಡಿಯಲ್ಲಿ ದಿನದ ೨೪ ಗಂಟೆಯೂ ಕುಡಿಯುವ ನೀರು ಹರಿಸುವ ಯೋಜನೆ ಇದಾಗಿದೆ ಎನ್ನಲಾಗಿದೆ.
ಕಾವೇರಿ ಬತ್ತಿದರೂ ಬತ್ತದ ಹಾರಂಗಿಗೆ ಒತ್ತು
ಕುಶಾಲನಗರ ಪಟ್ಟಣಕ್ಕೆ ೬ ಕಿ.ಮೀ. ದೂರದ ಹಳೆಕೂಡಿಗೆ ಬಳಿಯಿಂದಲೇ ಏಕೆ ನೀರು ತರಬೇಕು? ಕುಶಾಲನಗರದಲ್ಲಿಯೇ ಕಾವೇರಿ ನದಿ ಹರಿದಿಲ್ಲವೇ ಎಂಬ ಪ್ರಶ್ನೆಗೆ, ಕಾವೇರಿ ನದಿಯಲ್ಲಿ ಒಂದು ವೇಳೆ ಕುಡಿಯುವ ನೀರಿಗೆ ಸಂಚಕಾರ ಬಂದರೆ ಹಾರಂಗಿ ಜಲಾಶಯದಿಂದ ನದಿಗೆ ನೀರನ್ನು
(ಮೊದಲ ಪುಟದಿಂದ) ಹರಿಬಿಟ್ಟು ಅಲ್ಲಿಂದ ಪೈಪುಗಳ ಮೂಲಕ ಕುಶಾಲನಗರಕ್ಕೆ ಸರಬರಾಜು ಮಾಡುವ ಯೋಜನೆ ಇದಾಗಿದೆ.
ಅಂದರೆ ಎರಡು ನದಿಗಳ ಪೈಕಿ ಒಂದು ನದಿಯಲ್ಲಿ ನೀರು ಬತ್ತಿದರೆ ಮತ್ತೊಂದು ನದಿಯಲ್ಲಿ ನೀರು ಬಳಸಿಕೊಳ್ಳುವ ಯೋಜನೆ ಇದಾಗಿದೆ.
ಇನ್ನಾದರೂ ಕಾವೇರಿಗೆ ತ್ಯಾಜ್ಯ ಹರಿಯದಿರಲಿ
ಕುಶಾಲನಗರ ಪಟ್ಟಣದಲ್ಲಿ ‘ಎಲ್’ ಆಕಾರದಲ್ಲಿ ಹರಿದಿರುವ ಕಾವೇರಿ ನದಿಯ ಒಡಲಿಗೆ ಕುಶಾಲನಗರದ ಬಹುತೇಕ ಬಡಾವಣೆಗಳ ಜನವಸತಿಯ ತ್ಯಾಜ್ಯ, ಕಲ್ಮಶ ನೀರು ಹರಿದು ಸೇರುತ್ತಿದೆ.
ಹಾಗೆಯೇ ಕಾವೇರಿ ನದಿ ಹರಿಯುವ ಮಾರ್ಗದ ಮುಳ್ಳುಸೋಗೆ, ಗುಮ್ಮನಕೊಲ್ಲಿ, ಕೂಡ್ಲೂರು, ಕೂಡುಮಂಗಳೂರು ಹಾಗೂ ಕೂಡಿಗೆ ಗ್ರಾಮಗಳ ಜನವಸತಿಯ ಕಲ್ಮಶ ನೀರು ಕಾವೇರಿ ಒಡಲು ಸೇರುತ್ತಿದೆ.
ಅಷ್ಟೇ ಅಲ್ಲದೇ ನದಿಯಾಚೆಯ ಮೈಸೂರು ಜಿಲ್ಲೆಯ ನದಿದಂಡೆಯ ಗ್ರಾಮಗಳ ತ್ಯಾಜ್ಯ ನೀರು ನದಿಯ ಒಡಲು ಸೇರುತ್ತಲೇ ಇದೆ. ಮೊದಲು ಇಂತಹ ತ್ಯಾಜ್ಯ ಕಲ್ಮಶಗಳನ್ನು ನದಿಯ ಒಡಲಿಗೆ ಹರಿಸುವುದನ್ನು ತಪ್ಪಿಸಬೇಕಿದೆ. ಇಲ್ಲವಾದಲ್ಲಿ ತ್ಯಾಜ್ಯ ನೀರಿನ ಸಂಗ್ರಹದ ಕಾವೇರಿ ನೀರನ್ನು ನಾವು ಒಲ್ಲೆ ಎಂದು ನಿವಾಸಿಗಳು ಏನಾದರೂ ವಿರೋಧ ವ್ಯಕ್ತಪಡಿಸಿ ದರೆ ಈ ವಿನೂತನ ಕುಡಿಯುವ ನೀರಿನ ಯೋಜನೆ ಹಳ್ಳಹಿಡಿದ ಮತ್ತೊಂದು ಯುಜಿಡಿ ಯೋಜನೆ ಯಂತಾಗದಿರಲಿ ಎಂಬುದು ಜನರ ಕಳಕಳಿಯಾಗಿದೆ.