ಕುಶಾಲನಗರ, ಫೆ. ೧೫: ಕುಶಾಲ ನಗರ ಪುರಸಭೆ ವ್ಯಾಪ್ತಿಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣ ಇದೀಗ ಪ್ಲಾಸ್ಟಿಕ್ ಮತ್ತು ತ್ಯಾಜ್ಯಮಯ ಕೇಂದ್ರವಾಗಿ ಪರಿವರ್ತನೆಗೊಳ್ಳುತ್ತಿದೆ.

ವಾರದ ಸಂತೆ ಮಾರುಕಟ್ಟೆ ಪ್ರತಿ ಮಂಗಳವಾರ ಈ ಆವರಣದಲ್ಲಿ ನಡೆಯುತ್ತಿದ್ದು, ಪ್ರದೇಶದಲ್ಲಿ ಪ್ಲಾಸ್ಟಿಕ್‌ಗಳೇ ಹಾರಾಡುತ್ತಿರುವುದು ಕಂಡು ಬರುತ್ತಿದೆ. ಇನ್ನೊಂದೆಡೆ ಸಂತೆಯ ಅಳಿದುಳಿದ ತ್ಯಾಜ್ಯಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡದೇ ಎಲ್ಲೆಂದರಲ್ಲಿ ರಾಶಿ ಹಾಕುತ್ತಿದ್ದು, ಹದ್ದು, ಕಾಗೆ, ನಾಯಿಗಳ ಆವಾಸ ಕೇಂದ್ರದAತೆ ಗೋಚರಿಸುತ್ತಿದೆ. ಸುಮಾರು ೧೪ ಎಕರೆ ವ್ಯಾಪ್ತಿಯ ಈ ಕೃಷಿ ಉತ್ಪನ್ನ ಮಾರುಕಟ್ಟೆ ಕೇಂದ್ರದಲ್ಲಿ ಕುಶಾಲನಗರ ವಾರದ ಸಂತೆ ನಡೆಯುತ್ತಿದ್ದು, ಇದರ ಸ್ವಚ್ಛತೆ ಬಗ್ಗೆ ಸ್ಥಳೀಯ ಪುರಸಭೆ ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವ ದೂರುಗಳು ಕೇಳಿಬಂದಿದೆ.

ಇನ್ನೊಂದೆಡೆ ಕೃಷಿ ಉತ್ಪನ್ನ ಮಾರುಕಟ್ಟೆ ಕಚೇರಿ ಮೂಲಕ ಸಂತೆ ವ್ಯಾಪಾರಿಗಳಿಂದ ಶುಲ್ಕ ವಸೂಲಿ ಮಾಡುತ್ತಿದ್ದು, ಅವರು ಕೂಡ ಸ್ವಚ್ಛತೆಯ ಗೋಜಿಗೆ ಹೋಗುತ್ತಿಲ್ಲ ಎನ್ನುವ ಆರೋಪ ಇದೆ. ಪಟ್ಟಣದ ಅತೀ ಸ್ವಚ್ಛ ಕೇಂದ್ರ ಆರ್‌ಎಂಸಿ ಆವರಣ ಇದೀಗ ಪೂರ್ಣ ಪ್ರಮಾಣದಲ್ಲಿ ಅಶುಚಿತ್ವದ ಕೇಂದ್ರವಾಗಿ ಪರಿವರ್ತನೆಗೊಂಡಿದೆ ಎನ್ನುತ್ತಾರೆ ಕಳೆದ ಹಲವು ವರ್ಷಗಳಿಂದ ಬೆಳಗಿನ ವೇಳೆ ವಾಯುವಿಹಾರಕ್ಕೆ ಬರುತ್ತಿರುವ ನಂಜಪ್ಪ ಹಾಗೂ ಪ್ಯಾರಡೇಸ್‌ರವಿ ಎಂಬವರು. ಇಡೀ ಪ್ರದೇಶದಲ್ಲಿ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳೇ ಕಂಡುಬರುತ್ತಿದೆ. ಸ್ವಚ್ಛತೆಯ ಕೊರತೆ ಎದುರಾಗಿದೆ ಎಂದು ಸಮೀಪದ ಬಡಾವಣೆ ನಿವಾಸಿ ಪಳಂಗಪ್ಪ ‘ಶಕ್ತಿ’ ಯೊಂದಿಗೆ ಸಮಸ್ಯೆಯ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಕುಶಾಲನಗರ-ಮೈಸೂರು ರಸ್ತೆಯ ಒತ್ತಿನಲ್ಲಿರುವ ಈ ಮಾರುಕಟ್ಟೆ ಕೇಂದ್ರದಲ್ಲಿ ಕೋಟಿಗಟ್ಟಲೇ ವೆಚ್ಚ ಮಾಡಿ ನಿರ್ಮಾಣಗೊಂಡಿರುವ ಗೋದಾಮುಗಳು ಪೊದೆಗಳಿಂದ ಆವೃತಗೊಂಡಿದ್ದು, ಇದರ ನಿರ್ವಹಣೆ ಮಾಡುವಲ್ಲಿ ಕೃಷಿ ಮಾರುಕಟ್ಟೆ ಆಡಳಿತ ಸಂಪೂರ್ಣ ನಿರ್ಲಕ್ಷö್ಯ ವಹಿಸಿದೆ.

ಮಾರುಕಟ್ಟೆ ಆವರಣದ ಕೆಳಭಾಗದಲ್ಲಿ ಕಾವೇರಿ ನದಿ ಹರಿಯುತ್ತಿದ್ದು, ಮಳೆಗಾಲದ ಅವಧಿಯಲ್ಲಿ ತ್ಯಾಜ್ಯ ನದಿ ಪಾಲಾಗುವ ಆತಂಕ ಎದುರಾಗಲಿದೆ. ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ತಾಲೂಕು ತಹಶೀಲ್ದಾರ್ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಕೇಂದ್ರದ ಆಡಳಿತಾಧಿಕಾರಿ ಟಿ.ಎಂ. ಪ್ರಕಾಶ್ ಈ ಬಗ್ಗೆ ಸಂಬAಧಿಸಿದ ಪುರಸಭೆ ಮತ್ತು ಕೇಂದ್ರದ ಅಧಿಕಾರಿ ಗಳೊಂದಿಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳ ಲಾಗುವುದು ಎಂದಿದ್ದಾರೆ.

ವಾರದ ಸಂತೆ ದಿನ ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತ ವ್ಯಾಪ್ತಿಯ ಜನರು ಸಂತೆ ವ್ಯಾಪಾರಕ್ಕೆಂದು ಆಗಮಿಸುತ್ತಿದ್ದು, ಸ್ವಚ್ಛತೆಯ ಅಭಾವದ ನಡುವೆ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಸಾಧ್ಯತೆ ಅಧಿಕವಾಗಿದೆ.

ಸಂತೆ ವ್ಯಾಪಾರಿಗಳು ಮಾರಾಟ ಮಾಡುವ ಆಹಾರ ವಸ್ತುಗಳ ಮೇಲೆ ಕ್ರಿಮಿಕೀಟಗಳಿಂದ ನಾಗರಿಕರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಂಭವದ ಆತಂಕ ಎದುರಾಗಿದೆ ಎಂದು ಸಂತೆ ವ್ಯಾಪಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆವರಣದೊಳಗೆ ಕಳೆದ ಕೆಲವು ವರ್ಷಗಳಿಂದ ಅರಣ್ಯ ಇಲಾಖೆ ಸಹಯೋಗದೊಂದಿಗೆ ಸ್ಥಳೀಯ ಕಾವೇರಿ ಪರಿಸರ ರಕ್ಷಣಾ ಬಳಗದ ಮೂಲಕ ಬೆಳೆಸಿದ ನೂರಾರು ಸಂಖ್ಯೆಯ ಗಿಡಮರಗಳಿಗೆ ಕೂಡ ಕೆಲವು ಸಂತೆ ವ್ಯಾಪಾರಿಗಳು ಹಾನಿ ಉಂಟು ಮಾಡಿರುವ ದೃಶ್ಯ ಕಾಣಬಹುದು. ಈ ಬಗ್ಗೆ ಪುರಸಭೆ ಆರೋಗ್ಯಾಧಿಕಾರಿ ಉದಯ್ ಕುಮಾರ್ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮತ್ತು ಪುರಸಭೆ ಕಾರ್ಮಿಕರು ಸೇರಿ ಸ್ವಚ್ಛತಾ ಕಾರ್ಯ ನಡೆಸುತ್ತಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ‘ಶಕ್ತಿ’ಯೊಂದಿಗೆ ಭರವಸೆ ವ್ಯಕ್ತಪಡಿಸಿದ್ದಾರೆ.

- ಚಂದ್ರಮೋಹನ್