(ವರದಿ: ಹೆಚ್. ಕೆ ಜಗದೀಶ್)

ಗೋಣಿಕೊಪ್ಪಲು, ಫೆ. ೧೪: ಎರಡು ಅಮಾಯಕ ಜೀವಗಳನ್ನು ಬಲಿ ಪಡೆಯುವ ಮೂಲಕ ದ.ಕೊಡಗನ್ನು ತಲ್ಲಣಗೊಳಿಸಿದ್ದ ಹೆಣ್ಣು ಹುಲಿಯನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ಮಂಗಳವಾರ ಮುಂಜಾನೆ ವೇಳೆ ಐದು ಸಾಕಾನೆಗಳನ್ನು ಹುಲಿಯ ಕಾರ್ಯಾಚರಣೆಗೆ ಬಳಸಿಕೊಂಡ ಅಧಿಕಾರಿಗಳ ತಂಡ ನೂರಾರು ಸಿಬ್ಬಂದಿಗಳನ್ನು ವಿವಿಧ ಪ್ರದೇಶಗಳಿಗೆ ನಿಯೋಜನೆ ಗೊಳಿಸಿದ್ದರು. ಮಧ್ಯಾಹ್ನ ವೇಳೆಗೆ ನಾಗರಹೊಳೆ ರಾಷ್ಟಿçÃಯ ಉದ್ಯಾನವನದ ಅಂಚಿನ ನಾಣಚ್ಚಿ ಕಾಡಿನಲ್ಲಿ ಹುಲಿ ಇರುವುದನ್ನು ಪತ್ತೆ ಹಚ್ಚಿದ ಕಾರ್ಯಾಚರಣೆ ತಂಡ ಹಿರಿಯ ಅಧಿಕಾರಿಗಳಿಗೆ ಮಾಹಿತಿ ಒದಗಿಸಿತು.

ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ತಕ್ಷಣ ಹುಲಿಯನ್ನು ಸುತ್ತುವರೆಯಲಾಯಿತು. ಸಾಕಾನೆಯಾದ ಅಭಿಮನ್ಯುವಿನ ಮುಂದಾಳತ್ವದಲ್ಲಿ ಇತರ ಆನೆಗಳು ಕಾರ್ಯಾಚರಣೆಗೆ ಇಳಿದವು. ನಂತರ ನುರಿತ ಸಿಬ್ಬಂದಿ ಹುಲಿಯ ಮೇಲೆ ಅರವಳಿಕೆ ಪ್ರಯೋಗ ಮಾಡಿದ್ದು, ಕಾರ್ಯಾಚರಣೆ ತಂಡ ಹುಲಿಯನ್ನು ವಶಕ್ಕೆ ಪಡೆದು ಅಗತ್ಯ ಚಿಕಿತ್ಸೆ ಮುಂದುವರಿಸಿ, ನಾಗರಹೊಳೆ ಮಾರ್ಗವಾಗಿ ಮೈಸೂರು ಸಮೀಪದ ಕೂರ್ಗಳ್ಳಿ ಹುಲಿ ಸಂರಕ್ಷಣಾ ಕೇಂದ್ರಕ್ಕೆ ಸಾಗಿಸಿತು. ಕೊಡಗಿನವರೇ ಆದ ದುಬಾರೆಯಲ್ಲಿ ಎಆರ್‌ಎಫ್‌ಓ ಆಗಿರುವ ಕನ್ನಂಡ ರಂಜನ್ ಅವರು ಮಾಡಿದ ಅರವಳಿಕೆ ಪ್ರಯೋಗ ಗುರಿ ತಪ್ಪಲಿಲ್ಲ. ಅವರ ಪರಿಣತಿ ಹುಲಿಯನ್ನು ಮಣಿಸುವುದರಲ್ಲಿ ಯಶಸ್ವಿಯಾಯಿತು. ಈ ಕುರಿತು ಸಿಸಿಎಫ್ ಬಿಎನ್ ಎನ್ ಮೂರ್ತಿ ಅವರು “ಶಕ್ತಿ” ಯೊಂದಿಗೆ ಖಾತರಿಪಡಿಸಿದ್ದಾರೆ. ಕಾರ್ಯಾಚರಣೆ ವೇಳೆ ಸೆರೆಯಾದ ಹುಲಿಯು ಹೆಣ್ಣಾಗಿದ್ದು ೧೧ ರಿಂದ ೧೨ ವರ್ಷದ್ದಾಗಿದೆ ಎಂದು ಅವರು ಮಾಹಿತಿಯಿತ್ತರು.

ಹುಲಿಯ ಕಾಲು ಹಾಗೂ ಇತರ ಭಾಗದಲ್ಲಿ ಗಾಯವಾಗಿದ್ದು ನಿತ್ರಾಣಗೊಂಡಿದೆ. ಈ ಹುಲಿ ವೀರನಹೊಸಳ್ಳಿ ವಿಭಾಗದ ಕಾಡಿನಿಂದ ಬಂದುದಾಗಿದೆ. ಅರಣ್ಯದಲ್ಲಿದ್ದಾಗ ಮತ್ತೊಂದು ಹುಲಿಯೊಂದಿಗೆ ನಡೆದ ಕಾಳಗದಲ್ಲಿ ಈ ಗಾಯಗಳುಂಟಾಗಿರಬಹುದು ಎಂದು ಎಸಿಎಫ್‌ಒ ಗೋಪಾಲ್ ಮಾಹಿತಿ ಒದಗಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅರಣ್ಯ ಪ್ರದೇಶದಿಂದ ಸುಲಭದ ಬೇಟೆ ಮೂಲಕ ಆಹಾರಕ್ಕಾಗಿ ನಾಗರಿಕರು ವಾಸ ಮಾಡುವ ಕಾಫಿ ತೋಟದ ಬಳಿ ಆಗಮಿಸಿರಬಹುದು ಎಂದು ಅವರು ತಿಳಿಸಿದ್ದಾರೆ. ಕಾರ್ಯಾಚರಣೆ ಬಗ್ಗೆ ನಾಗರಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಭಾಗದಲ್ಲಿ ಇನ್ನೂ ಹಲವು ಹುಲಿಗಳ ಸಂಚಾರವಿರುವ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ.

ವಿವಿಧ ಜಿಲ್ಲೆಯ ಸಿಬ್ಬಂದಿಗಳನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿದೆ. ಹುಲಿಯ ಚಲನವಲನಗಳನ್ನು ಪತ್ತೆ ಹಚ್ಚುವ ಸಲುವಾಗಿ ಹಲವಾರು ಕಡೆಗಳಲ್ಲಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಅಧಿಕಾರಿಗಳ ತಂಡ ಸ್ಥಳದಲ್ಲಿ ಮೊಕ್ಕಾಂ ಹೂಡಿದೆ ಎಂದು ನಾಗರಹೊಳೆ ವನ್ಯಜೀವಿ ವಿಭಾಗದ ನಿರ್ದೇಶಕ ಹರ್ಷಕುಮಾರ್ ತಿಳಿಸಿದ್ದಾರೆ.

ಕಾರ್ಯಾಚರಣೆ

ಮೂಲತಃ ಪಂಚವಳ್ಳಿ ಸಮೀಪದ ಅನುಗೋಡು ಗ್ರಾಮದ ಮಧು ಎಂಬವರ ಏಕೈಕ ಪುತ್ರ ಚೇತನ್ ಹಾಗೂ ಇದೇ ಗ್ರಾಮದ ಜೇನುಕುರುಬರ ರಾಜು ಎಂಬವರುಗಳನ್ನು ಹುಲಿಯು ಚೂರಿಕಾಡು ವ್ಯಾಪ್ತಿಯ ಕಾಫಿ ತೋಟದಲ್ಲಿ ಕೊಂದು ಹಾಕಿತ್ತು. ಇದರಿಂದ ಈ ಭಾಗದ ಜನತೆ ಸಹಜವಾಗಿಯೇ ಆಕ್ರೋಶಗೊಂಡಿದ್ದರು. ಇಲಾಖೆ ನಿರ್ಲಕ್ಷö್ಯಕ್ಕೆ ಅಮಾಯಕ ಜೀವಗಳು ಬಲಿಯಾದವು ಎಂದು ಗಂಭೀರ ಆರೋಪವನ್ನು ಮಾಡಿದ್ದರು. ಇದರಿಂದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಆತಂಕಕ್ಕೀಡಾಗಿದ್ದರು. ಒಂದೆಡೆ ನಾಗರಿಕರ ಆಕ್ರೋಶ ಇನ್ನೊಂದೆಡೆ ಹಿರಿಯ

(ಮೊದಲ ಪುಟದಿಂದ) ಅಧಿಕಾರಿಗಳ ಒತ್ತಡ ಮತ್ತೊಂದೆಡೆ ಸರ್ಕಾರದ ಸುತ್ತೋಲೆಗಳು ಇವುಗಳನ್ನೆಲ್ಲ ಸಮನಾಗಿ ನೋಡಬೇಕಾದ ಅನಿವಾರ್ಯ ಪರಿಸ್ಥಿತಿ ಕೊಡಗಿನ ಹಿರಿಯ ಅರಣ್ಯ ಅಧಿಕಾರಿಗಳಾದ ಸಿಸಿಎಫ್ ಬಿ.ಎನ್.ಎನ್. ಮೂರ್ತಿ, ನಾಗರಹೊಳೆ ವನ್ಯ ಜೀವಿ ವಿಭಾಗ ನಿರ್ದೇಶಕ ಹರ್ಷಕುಮಾರ್ ಹಾಗೂ ನಾಗರಹೊಳೆ ವನ್ಯಜೀವಿಯ ಎಸಿಎಫ್ ಗೋಪಾಲ್ ಇವರದ್ದಾಗಿತ್ತು.

ಈ ಹಿನ್ನೆಲೆಯಲ್ಲಿ ನಾಗರಿಕರ ಅಭಿಪ್ರಾಯವನ್ನು ಕ್ರೋಢೀಕರಿಸಿ ಕೊಂಡ ಅಧಿಕಾರಿಗಳು ಮೊದಲ ಆದ್ಯತೆಯಾಗಿ ಹುಲಿಯನ್ನು ಸೆರೆ ಹಿಡಿಯಲು ಅಗತ್ಯ ಕ್ರಮಕ್ಕೆ ಮುಂದಾಗಿದ್ದರು. ೧೫೦ಕ್ಕೂ ನುರಿತ ಅರಣ್ಯ ಇಲಾಖೆಯ ಸಿಬ್ಬಂದಿಗಳು ತಮ್ಮ ಪ್ರಾಣವನ್ನು ಲೆಕ್ಕಿಸದೆ ಚೂರಿಕಾಡು ವ್ಯಾಪ್ತಿಯ, ನೂರಾರು ಎಕರೆ ಕಾಫಿ ತೋಟದಲ್ಲಿ ಸಂಚರಿಸಿ ಹುಲಿಯ ಹೆಜ್ಜೆ ಗುರುತುಗಳನ್ನು ಕಂಡು ಹಿಡಿಯುವ ಮೂಲಕ ಹುಲಿಯ ಕಾರ್ಯಾಚರಣೆಗೆ ಮುಂದಾಗಿದ್ದರು.

ಮತ್ತಿಗೋಡು ಸಾಕಾನೆ ಶಿಬಿರದಿಂದ ಅಭಿಮನ್ಯು ಆನೆಯೊಂದಿಗೆ ಮಾವುತರಾದ ವಸಂತ ಹಾಗೂ ರಾಜ, ಅಶ್ವಥಾಮ ಆನೆಯ ಮಾವುತರಾದ ಶಿವು ಹಾಗೂ ಗಣೇಶ, ಭೀಮ ಆನೆಯ ಮಾವುತರಾದ ಗುಂಡು ಹಾಗೂ ನಂಜುAಡ ಗಣೇಶ ಆನೆಯ ಮಾವುತರಾದ ಜಯ, ರಾಮು ಹಾಗೂ ಮಧು ತಮ್ಮ ಆನೆಗಳೊಂದಿಗೆ ನುರಿತ ಸಿಬ್ಬಂದಿಗಳು ಮುಂಜಾನೆಯಿAದಲೆ ಚೂರಿಕಾಡು ವ್ಯಾಪ್ತಿಯ ವಿಸ್ತಾರವಾದ ಕಾಫಿ ತೋಟದ ನಾಲ್ಕು ದಿಕ್ಕುಗಳಿಂದ ಏಕ ಕಾಲದಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿದ್ದರು.

ಸ್ಥಳದಲ್ಲಿ ಹುಲಿಯ ಪತ್ತೆ ಆದಲ್ಲಿ ಕೂಡಲೇ ಹುಲಿಗೆ ಅರವಳಿಕೆ ಮದ್ದನ್ನು ಬಂದೂಕಿನಿAದ ಪ್ರಯೋಗಿಸುವ ನಿಟ್ಟಿನಲ್ಲಿ ನುರಿತ ವೈದ್ಯರು ಸಿದ್ಧರಾಗಿದ್ದರು. ಚೂರಿಕಾಡು ಕಾಫಿ ತೋಟಕ್ಕೆ ಹೊಂದಿಕೊAಡAತಿರುವ ನಾಗರಹೊಳೆ ರಾಷ್ಟಿçÃಯ ಉದ್ಯಾನವನದ ಅಂಚಿನಲ್ಲಿ ಇರುವ ಕ್ಯಾಂಪ್‌ನಲ್ಲಿ ಸಕಲ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿತ್ತು. ಕಾರ್ಯಾಚರಣೆ ತಂಡದಲ್ಲಿ ಕೊಡಗಿನ ಅರಣ್ಯ ಸಿಬ್ಬಂದಿಗಳಲ್ಲದೆ ಹೊರ ಜಿಲ್ಲೆಯ ಸಿಬ್ಬಂದಿಗಳನ್ನು ಬಳಸಿಕೊಳ್ಳಲಾಗಿತ್ತು. ಏನೆ ಆದರೂ ಹುಲಿಯನ್ನು ಸೆರೆ ಹಿಡಿಯಲೇಬೇಕೆಂದು ಕೊಡಗು ಸಿಸಿಎಫ್ ಬಿ.ಎನ್.ಎನ್. ಮೂರ್ತಿ ಸಿಬ್ಬಂದಿಗಳಿಗೆ ನಿರ್ದೇಶನ ನೀಡಿದ್ದರು. ಅದರಂತೆ ಹಠಕ್ಕೆ ಬಿದ್ದ ಕಾರ್ಯಾ ಚರಣೆ ತಂಡ ಕೊನೆಗೂ ಹುಲಿಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಯಿತು. ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಹುಲಿಯನ್ನು ಸೆರೆ ಹಿಡಿಯಲು ಬೇಕಾದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಮತ್ತೊಂದು ಹುಲಿ ಸೆರೆ

ಈ ನಡುವೆ ನಾಗರಹೊಳೆ ವ್ಯಾಪ್ತಿಯ ಹುಣಸೂರು ವಿಭಾಗಕ್ಕೆ ಸೇರಿದ ಡಿಬಿ ಗುಪ್ಪೆ ವಲಯದಲ್ಲಿ ಅಲ್ಲಿನ ಅರಣ್ಯ ಸಿಬ್ಬಂದಿ ಮತ್ತೊಂದು ೮-೯ ವರ್ಷದ ಹೆಣ್ಣು ಹುಲಿಯನ್ನು ಮಂಗಳವಾರ ಸೆರೆ ಹಿಡಿದಿದ್ದಾರೆ. ಆದರೆ, ಇದು ಕೊಡಗು ವ್ಯಾಪ್ತಿಗೆ ಸೇರಿಲ್ಲ.