ನಾಪೋಕ್ಲು, ಫೆ. ೧೪: ಸರಕಾರ ಬೆಳೆಗಾರರಿಗೆ ಘೋಷಿಸಿದ ಬೆಳೆ ನಷ್ಟ ಪರಿಹಾರ ನಾಪೋಕ್ಲು ವ್ಯಾಪ್ತಿಯ ಹಲವಾರು ಬೆಳೆಗಾರರಿಗೆ ದೊರಕದ ಪರಿಣಾಮ ಬೆಳೆಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ‘ಶಕ್ತಿ’ಯೊಂದಿಗೆ ತಮ್ಮ ಅಳಲು ತೋಡಿಕೊಂಡಿರುವ ಬೆಳೆಗಾರರು ಪರಿಹಾರ ಘೋಷಣೆಯಾದ ಕೂಡಲೇ ಸರಕಾರದ ಕಾನೂನಿನಂತೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದೇವೆ. ಅದಕ್ಕಾಗಿ ಕಂದಾಯ ಇಲಾಖೆಯಿಂದ ಸ್ವೀಕೃತಿಯೂ ಲಭಿಸಿದೆ. ಆದರೆ, ಎರಡು ಬಾರಿ ನೀಡಲಾದ ಪರಿಹಾರದಲ್ಲಿಯೂ ನಮ್ಮ ಖಾತೆಗೆ ಹಣ ವರ್ಗಾವಣೆಗೊಂಡಿಲ್ಲ. ಆದರೆ, ಶಾಸಕರು ಎಲ್ಲಾ ಬೆಳೆಗಾರರಿಗೆ ಬೆಳೆ ಪರಿಹಾರ ನೀಡಿರುವುದಾಗಿ ಘೋಷಿಸಿದ್ದಾರೆ. ಪರಿಹಾರ ದೊರೆಯದ ಬಗ್ಗೆ ನಾಪೋಕ್ಲು ಕಂದಾಯ ಪರಿವೀಕ್ಷಕರನ್ನು ವಿಚಾರಿಸಿದಾಗ ಪರಿಹಾರ ದೊರೆಯದವರ ಹೆಸರನ್ನು ಪಟ್ಟಿ ಮಾಡಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡಲಾಗುವುದು ಎಂದು ಹೇಳುತ್ತಿದ್ದಾರೆ. ಚುನಾವಣೆ ಘೋಷಣೆಯಾದ ಬಳಿಕ ನಮಗೆ ಪರಿಹಾರ ದೊರಕುವ ನಿರೀಕ್ಷೆ ಇಲ್ಲದಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕೆಂದು ಬೆಳೆಗಾರರು ಮನವಿ ಮಾಡಿದ್ದಾರೆ.