ಕೆರೆದಂಡೆಗಳ ಬದಿಯ ಮರಗಳ ಆಶ್ರಯದಲ್ಲಿ ತಾಳ್ಮೆಯಿಂದ ಕುಳಿತು, ಅವಕಾಶ ಸಿಕ್ಕೊಡನೆ ಅತಿವೇಗದಲ್ಲಿ ನೀರಿಗೆ ಒಮ್ಮೆಲೆ ಧುಮುಕಿ ತನ್ನ ಆಹಾರವಾದ ಮೀನನ್ನು ಹಿಡಿಯುವಲ್ಲಿ ಬಹುತೇಕ ನೂರರಷ್ಟು ಶೇಕಡ ಸಫಲತೆ ಕಂಡಿರುವ ಹಕ್ಕಿ ಎಂದರೆ, ಅದು ಮಿಂಚುಳ್ಳಿ ಅಥವಾ ‘ಕಿಂಗ್‌ಪಿಷರ್’. ಇಂತಹ ಒಂದು ಹಕ್ಕಿ ಆಡುವ ಭೇಟೆ ನೋಡಲು ಸಿಕ್ಕರೆಯೇ ಪಕ್ಷಿ ಪ್ರೇಮಿಗಳ ಪಕ್ಷಿ ವೀಕ್ಷಣಾ ಕಾರ್ಯಕ್ಕೆ ಸಾರ್ಥಕತೆ ಸಿಕ್ಕಂತಾಗುತ್ತದೆ. ಈ ಬೇಟೆಯ ದೃಶ್ಯದ ಚಿತ್ರ, ವೀಡಿಯೋ ತೆಗೆದು ಎಲ್ಲರೊಂದಿಗೆ ಹಂಚಿ ಖುಷಿಪಡುತ್ತಾರೆ. ಇಂತಹವರಲ್ಲಿ ಒಬ್ಬನಾದ ಜಪಾನಿನ ಪಕ್ಷಿ ಪ್ರೇಮಿ ಹಾಗೂ ಇಂಜಿನಿಯರ್ ೧೯೯೭ರಲ್ಲಿ ಈ ಹಕ್ಕಿಯ ಭೇಟೆ ಶೈಲಿ ನೋಡಿ ಬೆರಗಾಗಿ ಅದರ ಕೊಕ್ಕು, ದೇಹದ ಆಕಾರವನ್ನು ಆಧರಿಸಿ ರೈಲು ನಿರ್ಮಿಸಿದ್ದು, ಇದೇ ಮಾದರಿಯ ‘ಶಿಂಕಾAಸೆನ್ ೫೦೦ ಮಾದರಿ’ಯ ರೈಲು ಜಪಾನಿನಲ್ಲಿ ಈಗಲೂ ಕೂಡ ಚಾಲ್ತಿಯಲ್ಲಿರುವುದು ಅದ್ಭುತ.

ಕಡಿಮೆ ಅಗಲ ಹಾಗೂ ಉದ್ದನೆಯ ಕೊಕ್ಕೆಗಳನ್ನು ಹೊಂದಿರುವ ಮಿಂಚುಳ್ಳಿಯ ದೇಹದ ಆಕಾರವು ಗಾಳಿ, ನೀರು ಅದರ ಸುತ್ತ ಸಲಿಲವಾಗಿ ಹರಿಯಲು ಸಹಕರಿಸುತ್ತದೆ. ಯಾವುದೇ ಶಬ್ಧವಿಲ್ಲದೆ, ಕೆರೆಯಲ್ಲಿನ ಮೀನುಗಳಿಗೆ ಅರಿವಾಗದ ರೀತಿ ನೀರಿಗೆ ಧುಮುಕುವ ಮಿಂಚುಳ್ಳಿ ತನ್ನ ಹೊಟ್ಟೆ ನೀಗಿಸಿಕೊಳ್ಳುತ್ತದೆ. ತನ್ನ ಈ ದೇಹಾಕಾರದಿಂದಾಗಿ ಮೀನು ಬೇಟೆಯಲ್ಲಿ ಮಿಂಚುಳ್ಳಿ ಎತ್ತಿದ ಕೈ, ಅದಕ್ಕಾಗಿಯೇ ‘ಕಿಂಗ್‌ಫಿಷರ್’ ಎಂಬ ಹೆಸರು ಕೂಡ ದೊರೆತಿದೆ. ಇದೇ ಮಿಂಚುಳ್ಳಿಯು ಅತ್ಯಾಧುನಿಕ ರೈಲು ನಿರ್ಮಾಣಕ್ಕೆ ಸಹಕಾರಿಯಾಗಿರುವುದು ವಿಶೇಷ.

ಅತ್ಯಾಧುನಿಕ ಅತಿವೇಗದ ರೈಲುಗಳ ನಿರ್ಮಾಣವು ವಿಶ್ವದಲ್ಲೇ ಮೊದಲಿಗೆ ಜಪಾನ್ ದೇಶದಲ್ಲೇ ಪ್ರಾರಂಭಗೊAಡಿದ್ದು, ಇಂತಹ ಅತಿ ವೇಗದ ಬುಲೆಟ್ ಟ್ರೆöÊನ್ ಪರಿಕಲ್ಪನೆಯು ಇಂದು ವಿಶ್ವದಾದ್ಯಂತ ಹರಡಿದೆ. ೧೯೬೪ ರಲ್ಲಿ ಇಂತಹ ಅತಿ ವೇಗದ ‘ಶಿಂಕಾAಸೆನ್’ ಎಂಬ ಹೆಸರಿನ ಬುಲೆಟ್ ರೈಲನ್ನು ಮೊದಲಿಗೆ ಜಪಾನ್‌ನಲ್ಲಿ ನಡೆದ ಒಲಂಪಿಕ್ಸ್ ಕ್ರೀಡಾಕೂಟದ ಸಂದರ್ಭ ಉದ್ಘಾಟಿಸಲಾಯಿತು.

ಗಂಟೆಗೆ ೨೨೦ ಕಿ.ಮೀ ಚಲಿಸಬಲ್ಲ ಇಂತಹ ರೈಲುಗಳು ತಕ್ಷಣವೇ ಪ್ರಸಿದ್ಧತೆ ಪಡೆದವು. ಅತಿ ವೇಗ ಚಲಿಸುವ ಈ ರೈಲುಗಳು ಸಹಜವಾಗಿ ಜೋರಾಗಿ ಶಬ್ಧ ಮಾಡುತ್ತಿದ್ದವು. ಟನಲ್‌ಗಳ ಒಳಗೆ ಪ್ರವೇಶಿಸುವಾಗ ಸ್ಫೋಟದಂತೆ ಶಬ್ಧ ಸೃಷ್ಟಿಯಾಗುತ್ತಿತ್ತು. ಅರಣ್ಯ ಪ್ರದೇಶಗಳಲ್ಲಿ ಇಂತಹ ಟನಲ್‌ಗಳೊಳಗೆ ರೈಲು ತೆರಳುವಾಗ ಅತಿಯಾದ ಶಬ್ಧ ಮಾಲಿನ್ಯದಿಂದ ಪ್ರಾಣಿ-ಪಕ್ಷಿ ಸಂಕುಲಗಳಿಗೆ ತೊಂದರೆಯಾಗುತ್ತಿತ್ತು. ನಗರ ಪ್ರದೇಶಗಳ ವ್ಯಾಪ್ತಿಯಲ್ಲಿಯೂ ಕೂಡ ಸುಮಾರು ೪೦೦ ಮೀಟರ್‌ಗಳ ವರೆಗೂ ರೈಲಿನ ಸದ್ದು ತಲುಪಿ ನಿವಾಸಿಗಳ ನಿದ್ದೆಗೆಡುತ್ತಿತ್ತು.

ಈ ಬಗ್ಗೆ ಅಂದು ಯಾರೂ ಕೂಡ ತಲೆ ಕೆಡಿಸಿಕೊಂಡಿರಲಿಲ್ಲ ವಾದರೂ ೧೯೯೭ರಲ್ಲಿ ಈ ಶಬ್ಧ ಮಾಲಿನ್ಯ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿದಂತಾಯಿತು.

೧೯೬೪ರಲ್ಲಿ ಪ್ರಾರಂಭವಾದ ಶಿಂಕಾAಸೆನ್ ರೈಲು ಗಂಟೆಗೆ ೨೦೦ಕಿಮೀ ಚಲಿಸುವ ಸಾಮರ್ಥ್ಯ ಹೊಂದಿತ್ತಾದರೂ ಇದಕ್ಕಿಂತ ಹೆಚ್ಚಿನ ವೇಗವನ್ನು ಸಾಧಿಸುವ ಛಲ ಜಪಾನ್ ಸರಕಾರದ ಉದ್ದೇಶವಾಗಿತ್ತು. ಈ ನಿಟ್ಟಿನಲ್ಲಿ ೧೯೯೭ರಲ್ಲಿ ಇಂಜಿನಿಯರ್ ಗಳ ತಂಡವೊAದಕ್ಕೆ ಈ ಜವಾಬ್ದಾರಿಯನ್ನು ಸರಕಾರ ನೀಡಿತು. ಗಂಟೆಗೆ ೨೦೦ ಕಿ.ಮೀ ಚಲಿಸಿಯೇ ಹೆಚ್ಚಿನ ಶಬ್ಧ ಮಾಲಿನ್ಯ ಸೃಷ್ಟಿಸುತ್ತಿದ್ದ ರೈಲಿಗಿಂತಾ ಹೆಚ್ಚು ವೇಗದ ರೈಲು ನಿರ್ಮಾಣದಿಂದ ಶಬ್ಧ ಮಾಲಿನ್ಯವೂ ಉಲ್ಬಣವಾಗುವುದು ಖಚಿತವಾಗಿತ್ತು. ಈ ಸಮಸ್ಯೆಗೆ ಪರಿಹಾರ ಹುಡುಕಲು ಇಂಜಿನಿಯರಿAಗ್ ತಂಡ ಎಲ್ಲಾ ಅತ್ಯಾಧುನಿಕ ಮಾದರಿಯ ಇಂಜಿನಿಯರಿAಗ್ ತಂತ್ರಗಳನ್ನು ಅಳವಡಿಸುವ ಪ್ರಯತ್ನಗಳು ನಡೆಸುತ್ತಿತ್ತು. ಆದರೆ ತಂಡದ ಉಸ್ತುವಾರಿ ವಹಿಸಿದ್ದ ಈಜಿ ನಕಾಟ್ಸು ಹೆಸರಿನ ಇಂಜಿನಿಯರ್ ಎಂಬವರ ಮನದಲ್ಲಿ ಬೇರೆಯೇ ಉಪಾಯವಿತ್ತು.

ಈ ಇಂಜಿನಿಯರ್ ಒಬ್ಬ ಪಕ್ಷಿ ಪ್ರೇಮಿಯೂ ಆಗಿದ್ದರು. ಕಿರಿದಾದ ಮುಖ, ಉದ್ದನೆಯ ಕೊಕ್ಕೆ ಹೊಂದಿರುವ ಮಿಂಚುಳ್ಳಿಯು ಯಾವುದೇ ಶಬ್ಧವಿಲ್ಲದೆ ಅದರ ಆಹಾರವಾದ ಮೀನನ್ನು ಭೇಟೆ ಮಾಡುವ ದೃಶ್ಯ ಇವರಿಗೆ ನೋಡಿ ಅಚ್ಚರಿ ಎನಿಸಿತು. ಇದೇ ಆಕಾರದಲ್ಲಿ ರೈಲಿನ ಮುಂಭಾಗವನ್ನು ವಿನ್ಯಾಸಗೊಳಿಸಿದರೆ ಶಬ್ಧ ಮಾಲಿನ್ಯ ತಡೆಗಟ್ಟಬಹುದೆಂದು ತಿಳಿದುಕೊಂಡರು. ೧೯೬೪ರಲ್ಲಿ ನಿರ್ಮಿಸಿದ ಶಿಂಕಾAಸೆನ್ ರೈಲಿನ ಮುಂಭಾಗದ ಆಕಾರವು ಅವೈಜ್ಞಾನಿಕವಾಗಿದ್ದುದು ಟನಲ್ ಒಳಗೆ ಅತಿ ವೇಗದಿಂದ ಚಲಿಸಿದಾಗ ಟನಲ್ ಒಳಗಿನ ಗಾಳಿಗೆ ಅದೇ ದಾರಿಯಿಂದ ಹೊರಹೋಗಲು ಸಾಧ್ಯವಾಗದೆ ಟನಲ್‌ನ ಮತ್ತೊಂದು ಭಾಗದಿಂದ ಅತಿ ವೇಗದಲ್ಲಿ ಹೊರಹೋಗುವ ಸಂದರ್ಭ ಒತ್ತಡ ವ್ಯತ್ಯಾಸದಿಂದ ಅತಿಯಾದ ಶಬ್ಧ ಸೃಷ್ಟಿಯಾಗುತ್ತದೆ. ಇದರೊಂದಿಗೆ ರೈಲಿನ ವೇಗವೂ ಕೊಂಚ ಕಡಿಮೆಯಾಗುತ್ತದೆ. ೧೯೯೭ರಲ್ಲಿ ಈ ರೈಲಿನ ವಿನ್ಯಾಸವನ್ನು ಬದಲಿಸಿ ಮಿಂಚುಳ್ಳಿಯ ವಿನ್ಯಾಸ ನೀಡಿದ ಈಜಿ ನಕಾಟ್ಸು ನೇತೃತ್ವದ ಇಂಜಿನಿಯರ್‌ಗಳ ತಂಡ ಶಬ್ಧ ಮಾಲಿನ್ಯದ ಸಮಸ್ಯೆ ಪರಿಹರಿಸುವುದಲ್ಲದೆ ರೈಲಿನ ವೇಗವೂ ಹೆಚ್ಚಾಗಿದ್ದು, ಗಂಟೆಗೆ ಸುಮಾರು ೩೦೦ ಕಿಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಇದೇ ಮಾದರಿಯ ರೈಲುಗಳು ಇನ್ನೂ ಕೂಡ ಚಾಲ್ತಿಯಲ್ಲಿವೆ.

- ಪ್ರಜ್ವಲ್ ಜಿ.ಆರ್.