ಮಡಿಕೇರಿ, ಫೆ. ೧೪: ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಆರೋಗ್ಯ ಅಮೃತ ಅಭಿಯಾನ ಕಾರ್ಯಕ್ರಮ ಕುರಿತು ಜಿಲ್ಲಾಮಟ್ಟದ ತರಬೇತುದಾರರಿಗೆ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರಕ್ಕೆ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಜಗದೀಶ್ ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಬಿ. ಆನಂದ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಪ್ರಮುಖವಾಗಿ ಕಂಡುಬರುವ ಅಪೌಷ್ಟಿಕತೆ, ರಕ್ತಹೀನತೆ, ಕ್ಷಯ ಇತರ ಸಾಂಕ್ರಾಮಿಕ ರೋಗಗಳು ಹರಡದಂತೆ ಎಚ್ಚರಿಕೆ ಕ್ರಮ ವಹಿಸುವುದು ಆರೋಗ್ಯ ಅಮೃತ ಅಭಿಯಾನದ ಉದ್ದೇಶವಾಗಿದೆ ಎಂದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಶ್ರೀನಿವಾಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಮಂಜುನಾಥ್, ಮನೋರೋಗ ತಜ್ಞ ಡಾ. ಡೆವಿನ್, ಮೈಸೂರು ವಿಭಾಗ ವಲಯ ಮುಖ್ಯಸ್ಥ ಶಶಿಧರ್, ಗ್ರಾಮ ಪಂಚಾಯಿತಿ ಆರೋಗ್ಯ ಅಮೃತ ಅಭಿಯಾನ ಸಂಯೋಜಕರುಗಳಾದ ನಾಗೇಂದ್ರ ಸ್ವಾಮಿ, ಬ್ರೋಹಿಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತಿ ಹಾಜರಿದ್ದರು.