ಮಡಿಕೇರಿ, ಫೆ. ೧೩: ೧೬ನೇ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಮಾರ್ಚ್ ೪ ಮತ್ತು ೫ರಂದು ಗೋಣಿಕೊಪ್ಪಲಿನಲ್ಲಿ ಜರುಗಲಿದ್ದು, ಇಂದು ಮಡಿಕೇರಿಯ ಕಸಾಪ ಕಚೇರಿಯಲ್ಲಿ ನಡೆದ ಜಿಲ್ಲಾ ಕಸಾಪ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಜಿಲ್ಲೆಯ ಸಾಹಿತಿ, ಕೊಡಗಿನ ಸಾಹಿತ್ಯ ಸಂಶೋಧನಾ ಕ್ಷೇತ್ರದಲ್ಲಿ ತೀತಿರ ರೇಖಾ ವಸಂತ್ ಎಂದು ಪರಿಚಿತರಾಗಿರುವ ಡಾ. ಎಂ.ಪಿ. ರೇಖಾ ಅವರನ್ನು ಸರ್ವಾನುಮತ ದಿಂದ ಆಯ್ಕೆ ಮಾಡಲಾಗಿದೆ. ಇದೇ ವೇಳೆ ೧೬ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ೧೬ ಪದವಿ ಪೂರ್ವ ಮತ್ತು ಪದವಿ ವಿದ್ಯಾರ್ಥಿಗಳಿಗೆ ಮತ್ತು ಹದಿನಾರು ಕವಿಗಳ ಎರಡು ಕವಿಗೋಷ್ಠಿ ನಡೆಸು ವಂತೆ ತೀರ್ಮಾನಿಸಲಾಯಿತು. ಜಿಲ್ಲೆಯಲ್ಲಿ ಸಾಧನೆ ಮಾಡಿದ ಅರ್ಹ ೧೬ ಸಾಧಕರನ್ನು ಗುರುತಿಸಿ ಸನ್ಮಾನಿಸುವಂತೆ ನಿರ್ಧರಿಸಲಾಯಿತು. ಸಮ್ಮೇಳನದಲ್ಲಿ ನಾಲ್ಕು ವಿಚಾರ ಗೋಷ್ಠಿಗಳನ್ನು ಏರ್ಪಡಿಸುವಂತೆ ನಿರ್ಧರಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ವಹಿಸಿದ್ದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಎಸ್.ಐ ಮುನಿರ್ ಅಹಮದ್, ರೇವತಿ ರಮೇಶ್, ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಮಡಿಕೇರಿ ತಾಲೂಕು ಅಧ್ಯಕ್ಷ ಅಂಬೇಕಲ್ ನವೀನ್, ಕುಶಾಲನಗರ ತಾಲೂಕು ಅಧ್ಯಕ್ಷ ಕೆ.ಎಸ್. ಮೂರ್ತಿ, ಸಂಘಟನಾ ಕಾರ್ಯದರ್ಶಿ ಎಂ.ಇ. ಮೋಹಿದೀನ್, ಸಹ ಕಾರ್ಯದರ್ಶಿ ಗಳಾದ ಕುಮಾರ್, ಡೆನ್ನಿಸ್ ಡಿಸೋಜಾ, ನಿರ್ದೇಶಕರುಗಳಾದ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ, ಸಹನ ಕಾಂತಬೈಲು, ಎಚ್.ಎಸ್ ಪ್ರೇಮಕುಮಾರ್ ಉಪಸ್ಥಿತರಿದ್ದರು.