ಕುಶಾಲನಗರ, ಫೆ. ೧೨: ಸೇವಾ ಚಟುವಟಿಕೆಗಳ ಬಗ್ಗೆ ದೃಢವಾದ ಸಂಕಲ್ಪ ಹೊಂದಿದಾಗ ಮಾತ್ರ ಅದು ಸಾಕಾರಗೊಳ್ಳಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ. ಬಿ.ಸಿ ಸತೀಶ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಕುಶಾಲನಗರ ಸಮೀಪದ ಜನತಾ ಕಾಲೋನಿ ಬಳಿ ಸ್ಥಳೀಯ ರಿಜಿಡ್ ಗ್ರೂಪ್ ವತಿಯಿಂದ ನಿರ್ಮಿಸಿರುವ ಗಡಿಯಾರ ಸ್ತಂಭ ಉದ್ಘಾಟನೆಗೊಳಿಸಿ ಮಾತನಾಡಿದರು. ಈ ಸಂದರ್ಭ ಜನತೆಗೆ ಸಂದೇಶ ನೀಡಿದ ಜಿಲ್ಲಾಧಿಕಾರಿಗಳು ಮುಂಬರುವ ಚುನಾವಣೆಯಲ್ಲಿ ಪ್ರತಿಯೊಬ್ಬರು ಕಡ್ಡಾಯವಾಗಿ ತಮ್ಮನ್ನು ಸಾರ್ವಜನಿಕ ಮತದಾನದಲ್ಲಿ ತೊಡಗಿಸಿಕೊಳ್ಳಬೇಕು ಎಂದರಲ್ಲದೆ ಪ್ರಮುಖ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳದೆ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಕರೆ ನೀಡಿದರು.
ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಸ್ವಾಸ್ಥö್ಯ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬ ಸಾರ್ವಜನಿಕರು ಕೈಜೋಡಿಸಬೇಕಾಗಿದೆ. ಪೊಲೀಸ್ ಇಲಾಖೆಯೊಂದಿಗೆ ನಾಗರಿಕರು ಕೈಜೋಡಿಸಿ ಅಪರಾಧ ಮುಕ್ತ ಸಮಾಜ ನಿರ್ಮಾಣ ಮಾಡಬೇಕು ಎಂದರು. ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳ ಘಟನೆಗಳು ಹೆಚ್ಚಳವಾಗುತ್ತಿದ್ದು, ಈ ಬಗ್ಗೆ ವಿಷಾದ ವ್ಯಕ್ತಪಡಿಸಿದ ಅವರು, ಅಪಘಾತ ಮುಕ್ತ ಸಂಚಾರ ಆಗಬೇಕಾಗಿದೆ ಎಂದರು.
ಕುಶಾಲನಗರ ರಿಜಿಡ್ ಗ್ರೂಪ್ ಸದಸ್ಯ ಕೆ.ಎಸ್. ನಾಗೇಶ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯರಾದ ಎಂ.ಬಿ. ಸುರೇಶ್, ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಎಲ್. ಉದಯ್ ಕುಮಾರ್ ಕಾರ್ಯಕ್ರಮ ಆಯೋಜಕರಾದ ಕೆ.ಎನ್. ನಾಗಪ್ರವೀಣ್, ಜಿ. ರಾಘವೇಂದ್ರ, ಎನ್.ವಿ. ಬಾಬು, ಎ.ಎಸ್. ಕುಮಾರ್, ವಿ.ಆರ್. ಮಂಜುನಾಥ್, ಎಸ್.ಎಸ್. ನಾಗೇಂದ್ರ, ಪಿ.ಕೆ. ರಘು, ಚಿತ್ರ ರಮೇಶ್, ಪ್ರತಿಮ ರಾಘವೇಂದ್ರ ಮತ್ತಿತರರು ಇದ್ದರು.