ಸೋಮವಾರಪೇಟೆ, ಫೆ. ೧೩: ರಾಜ್ಯ ಒಕ್ಕಲಿಗರ ಸಂಘದ ಆಶ್ರಯದಲ್ಲಿ ಸೋಮವಾರಪೇಟೆ ಪಟ್ಟಣದಲ್ಲಿ ರೂ. ೨ ಕೋಟಿ ವೆಚ್ಚದಲ್ಲಿ ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತವಾಗಿ ವಸತಿ ನಿಲಯವನ್ನು ಪ್ರಾರಂಭಿಸಲಾಗುವುದೆAದು ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣದ ಬಸವೇಶ್ವರ ರಸ್ತೆ ಸಮೀಪ ಈಗಾಗಲೇ ಜಾಗವನ್ನು ಗುರುತಿಸಲಾಗಿದ್ದು, ವಸತಿ ನಿಲಯ ನಿರ್ಮಾಣದ ಕುರಿತು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಹತ್ತರವಾದ ತೀರ್ಮಾನ ಕೈಗೊಳ್ಳಲಾಗಿದೆ. ವಸತಿ ನಿಲಯಕ್ಕೆ ೨ ಕೋಟಿ ಹಣವನ್ನು ಮಂಜೂರು ಮಾಡಲಾಗಿದ್ದು, ಜೂನ್ ತಿಂಗಳಲ್ಲಿ ಕೆಲಸ ಪ್ರಾರಂಭವಾಗಲಿದೆ. ಉದ್ದೇಶಿತ ಯೋಜನೆ ಮುಂದಿನ ಆರೇಳು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದರು.
ವಸತಿ ನಿಲಯದಲ್ಲಿ ಪಟ್ಟಣಕ್ಕೆ ಸಮೀಪದ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಒಕ್ಕಲಿಗ ಜನಾಂಗದ ಯುವತಿಯರಿಗೆ ಉಚಿತವಾಗಿ ಅವಕಾಶ ನೀಡಲಾಗುವುದು. ಮುಂದಿನ ಶೈಕ್ಷಣಿಕ ಸಾಲಿನಿಂದ ಕುಶಾಲನಗರದಲ್ಲಿ ಒಕ್ಕಲಿಗ ಜನಾಂಗಕ್ಕೆ ಸೇರಿದ ಬಾಲಕರಿಗೆ ಉಚಿತವಾಗಿ ವಸತಿ ನಿಲಯ ಪ್ರಾರಂಭಿಸಲಾಗುವುದು ಎಂದರು.
ಒಕ್ಕಲಿಗರ ಸಂಘದ ವತಿಯಿಂದ ಈಗಾಗಲೇ ಜಿಲ್ಲೆಯ ಒಕ್ಕಲಿಗ ಜನಾಂಗಕ್ಕೆ ಸೇರಿದ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಎಸ್ಎಸ್ಎಲ್ಸಿ ಮತ್ತು ಪಿ.ಯು.ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗಿದೆ. ಜಿಲ್ಲೆಯ ೩೫ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿವಿಧ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿಯಿತ್ತರು.
ಸೋಮವಾರಪೇಟೆಯಲ್ಲಿ ಪ್ರಾರಂಭಿಸಲಾಗುವ ವಸತಿ ನಿಲಯದ ಕಟ್ಟಡದಲ್ಲಿಯೇ ಹೃದಯ ಸಂಬAಧಿ ರೋಗಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಪ್ರಥಮ ಚಿಕಿತ್ಸೆಯೊಂದಿಗೆ ಇಕೋ, ಇಸಿಜಿ, ಟ್ರೆಡ್ಮಿಲ್, ಡಯಾಲಿಸಿಸ್ ಕೇಂದ್ರಗಳನ್ನು ಪ್ರಾರಂಭಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಒಕ್ಕಲಿಗರ ಸಂಘದಿAದ ಅನುದಾನಕ್ಕೂ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಒಕ್ಕಲಿಗರ ಸಂಘದ ಪ್ರಮುಖರಾದ ಪ್ರಸಿ ಗೌಡಳ್ಳಿ, ಅಶ್ವಥ್, ನಗರಳ್ಳಿ ಬಸಪ್ಪ ಮತ್ತು ಹರಪಳ್ಳಿ ರುದ್ರಪ್ಪ ಇದ್ದರು.