ವೀರಾಜಪೇಟೆ, ಫೆ. ೧೩: ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಕೇಂದ್ರ ಸರ್ಕಾರದ ಅಮೃತ ಯೋಜನೆ ೨ ರಲ್ಲಿ ವೀರಾಜಪೇಟೆ ಪಟ್ಟಣಕ್ಕೆ ೬೦ ಕೋಟಿ ವೆಚ್ಚದಲ್ಲಿ ಸಮಗ್ರ ಕುಡಿಯುವ ನೀರು ಯೋಜನೆಗೆ ಪುರಸಭೆಯಲ್ಲಿ ನಡೆದ ತುರ್ತು ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಪುರಸಭೆ ಉಪಾಧ್ಯಕ್ಷ ಮಂಡೇಪAಡ ವಿನಾಂಕ್ ಕುಟ್ಟಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಗರ ನೀರು ಸರಬರಾಜು ಯೋಜನೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಅಜಯ್ ಮಾಹಿತಿ ನೀಡಿ ಇದು ಕೇಂದ್ರ ಸರ್ಕಾರದ ಯೋಜನೆಯಾಗಿದೆ. ೨೦೨೫ರ ವೇಳೆಗೆ ಎಲ್ಲಾ ಮನೆಮನೆಗಳಿಗೆ ಕುಡಿಯುವ ನೀರಿನ ಸರಬರಾಜು ಮಾಡುವ ಉದ್ದೇಶ ಹೊಂದಲಾಗಿದೆ. ಗ್ರಾಮೀಣ ಪ್ರದೇಶಗಳಿಗೆ ಜಲಜೀವನ್ ಮಿಷನ್ ಅಡಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ನಗರ ಪ್ರದೇಶಗಳಿಗೆ ಅಮೃತ ಯೋಜನೆ ಅಡಿಯಲ್ಲಿ ನೀರು ಸರಬರಾಜಿಗೆ ಯೋಜನೆ ರೂಪಿಸಲಾಗಿದೆ. ಬೇತ್ರಿಯಲ್ಲಿನ ನೀರಿನ ಸ್ಥಾವರ ಉಳಿಸಿಕೊಂಡು ಪಕ್ಕದಲ್ಲಿಯೆ ಮತ್ತೊಂದು ಜಾಕ್‌ವೆಲ್ ಅಳವಡಿಸಿ ೯೦ ಹೆಚ್.ಪಿ ಮೋಟಾರ್ ಅಳವಡಿಸಲಾಗುವುದು. ರಸ್ತೆಯ ಒಂದು ಬದಿಯಲ್ಲಿ ೧೪ ಇಂಚಿನ ಪೈಪ್ ಹಾಕಲಾಗುವುದು. ಪ್ರವಾಹದ ದೃಷ್ಠಿಯಿಂದ ಎಲಿವೇಟರ್ ಸ್ವಿಚ್ ಹಾಗು ಪ್ಯಾನಲ್ ಬೋರ್ಡ್ಗೆ ಯಾವುದೇ ಸಮಸ್ಯೆ ಆಗದ ರೀತಿಯಲ್ಲಿ ಅಳವಡಿಸಲಾಗುವುದು. ಭವಿಷ್ಯದ ದೃಷ್ಟಿಯಿಂದ ೨೦೫೫ ರ ಜನಗಣತಿ ಆಧಾರವನ್ನು ಗಣನೆಗೆ ಇಟ್ಟುಕೊಂಡು ಹಾಲಿ ಇರುವ ನೀರಿನ ಸಾಮಥ್ಯವನ್ನು ಗಣನೆಗೆ ತೆಗದುಕೊಂಡು ೫೩ ಲಕ್ಷ ಲೀಟರ್ ನೀರಿನ ಕ್ರೀಯಾ ಯೋಜನೆ ತಯಾರಿಸಲಾಗಿದೆ. ೨೦೨೫ ರೆ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ೫೫೧೯ ಮನೆಗಳಿಗೆ ನೀರು ಸರಬರಾಜು ಮಾಡಬಹುದಾಗಿದೆ ಎಂದು ಹೇಳಿದರು.

ಅಭಿಯಂತರ ಹೇಮಕುಮಾರ್ ಮಾತನಾಡಿ ೨೦೦೪ ರಲ್ಲಿ ನಿರ್ಮಾಣಗೊಂಡ ಬೇತ್ರಿಯ ಕಾವೇರಿ ನದಿಯಿಂದ ಪಟ್ಟಣಕ್ಕೆ ೧೩ ಲಕ್ಷ ಲೀಟರ್ ನೀರು ಸರಬರಾಜಾಗುತ್ತಿದೆ. ಇಂದಿನ ಜನಗಣತಿ ಆಧಾರ ಮೇಲೆ ೨೨ ಲಕ್ಷ ಲೀಟರ್ ನೀರು ಬೇಕಾಗಿದೆ. ಅಮೃತ ೨ ಯೋಜನೆ ಅಡಿಯಲ್ಲಿ ಕುಡಿಯುವ ನೀರು ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ೨೦೨೫ ರಿಂದ ಪಟ್ಟಣಕ್ಕೆ ೪೦ ಲಕ್ಷ ಲೀಟರ್ ನೀರು ಸರಬರಾಜು ಮಾಡಬಹುದು. ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ೧೦ ಲಕ್ಷ ಪಂಜರುಪೇಟೆಯಲ್ಲಿ ೧೦ ಲಕ್ಷ ಸಾಮಥ್ಯದ ನೀರಿನ ಟ್ಯಾಂಕ್ ನಿರ್ಮಾಣ ಮಾಡಲಾಗುವುದು. ಅರಸು ನಗರದಲ್ಲಿರುವ ನೀರಿನ ಟ್ಯಾಂಕ್‌ನ್ನು ಉನ್ನತೀಕರಣಗೊಳಿಸಿ ಅಮೃತ ೨ ಯೋಜನೆ ಪೂರ್ಣಗೊಂಡ ನಂತರ ಹಾಲಿ ಪಟ್ಟಣಕ್ಕೆ ಸರಬರಾಜಾಗುತ್ತಿರುವ ೧೩ ಲಕ್ಷ ಲೀಟರ್ ನೀರನ್ನು ಬೆಟ್ಟ ಪ್ರದೇಶಗಳಿಗೆ ಮಾತ್ರ ಸೀಮಿತಗೊಳಿಸಲಾಗುವುದು ಎಂದು ಹೇಳಿದರು.

ವೇದಿಕೆಯಲ್ಲಿ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷೆ ಯಶೋಧ, ಮುಖ್ಯಾಧಿಕಾರಿ ಚಂದ್ರಕುಮಾರ್ ಉಪಸ್ಥಿತರಿದ್ದರು.

ವಿರೋಧ: ೬೦ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕುಡಿಯುವ ನೀರಿನ ಯೋಜನೆ ಉತ್ತಮವಾಗಿದೆ. ಬೇತ್ರಿಯಿಂದ ಪಟ್ಟಣಕ್ಕೆ ಅಳವಡಿಸುವ ೧೪ ಇಂಚು ಪೈಪ್ ಅಳವಡಿಕೆಗೆ ವಿರೋಧವಿದೆ. ಈಗಾಗಲೆ ೮ ಇಂಚು ಪೈಪ್‌ನಲ್ಲಿ ನೀರು ಎಲ್ಲಿಗೂ ಸಾಕಾಗುತ್ತಿಲ್ಲ. ಭವಿಷ್ಯದ ದೃಷ್ಟಿಯನ್ನು ಅವಲೋಕಿಸಿದರೆ ೧೪ ಇಂಚು ಪೈಪ್ ಸಾಕಾಗುವುದಿಲ್ಲ. ಪ್ರವಾಹ ಸಂದರ್ಭ ಪಟ್ಟಣಕ್ಕೆ ನೀರು ಸರಬರಾಜು ಮಾಡಲು ಸಾಧ್ಯವಿಲ್ಲದ ಕಾರಣ ನನ್ನ ವಿರೋಧ ಇದೆ ಎಂದು ಸದಸ್ಯ ಸಿ.ಕೆ. ಪೃಥ್ವಿನಾಥ್ ಹೇಳಿದರು.