ಕೂಡಿಗೆ, ಫೆ. ೧೨: ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಇವರ ವತಿಯಿಂದ ೨೦೨೨-೨೩ನೇ ಸಾಲಿನ ಮುಂಗಾರು ಋತುವಿನಲ್ಲಿ ಜಿಲ್ಲೆಯ ರೈತರು ಬೆಳೆದ ಭತ್ತ ಹಾಗೂ ರಾಗಿಯನ್ನು ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಕೇಂದ್ರ ಪ್ರಾರಂಭಿಸಲಾಗಿದೆ. ರಾಜ್ಯ ಸರಕಾರದ ತೀರ್ಮಾನದಂತೆ ಈಗಾಗಲೇ ಕುಶಾಲನಗರ ಮತ್ತು ಸೋಮವಾರಪೇಟೆ ತಾಲೂಕಿನ ವ್ಯಾಪ್ತಿಯ ರೈತರಿಗೆ ಅನುಕೂಲವಾಗುವಂತೆ ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಡ್ಲೂರು ಕೈಗಾರಿಕಾ ಕೇಂದ್ರ ವ್ಯಾಪ್ತಿಯ ಕರ್ನಾಟಕ ರಾಜ್ಯ ಉಗ್ರಾಣ ಕೇಂದ್ರದ ಆವರಣದಲ್ಲಿ ಕುಶಾಲನಗರ ಮತ್ತು ಸೋಮವಾರಪೇಟೆ ತಾಲೂಕಿನ ರೈತರಿಗಾಗಿ ಭತ್ತ ಮತ್ತು ರಾಗಿ ಖರೀದಿ ಕೇಂದ್ರ ಆರಂಭಗೊAಡಿದೆ.
ಜಿಲ್ಲಾಧಿಕಾರಿಗಳ ನೇತೃತ್ವದ ಜಿಲ್ಲಾ ಕಾರ್ಯಪಡೆಯ ತೀರ್ಮಾನದಂತೆ ಜನವರಿ ೧ ರಿಂದ ಭತ್ತ ಖರೀದಿ ನೊಂದಣಿ ಕಾರ್ಯ ಕುಶಾಲನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣ ಮತ್ತು ಸೋಮವಾರಪೇಟೆ ಕೃಷಿ ಉತ್ಪನ್ನ ಉಪ ಪ್ರಾಂಗಣದ ಆವರಣದಲ್ಲಿ ನಡೆಯಿತು. ಕುಶಾಲನಗರ ತಾಲೂಕಿನಿಂದ ೭೪ ರೈತರು, ಸೋಮವಾರಪೇಟೆ ತಾಲೂಕಿನಿಂದ ೯೯ ರೈತರು ನೊಂದಣಿ ಮಾಡಿಕೊಂಡಿದ್ದರು. ರೈತರು ಭತ್ತ ಬೆಳೆಯ ಕಟಾವು ಮಾಡಿ ಭತ್ತವನ್ನು ಕಣದಲ್ಲಿ ಸಿದ್ದತೆ ಮಾಡಿ ನಂತರ ಕೃಷಿ ಮಾರಾಟ ಮಂಡಳಿಯವರು ನೀಡಿದ ಚೀಲಗಳಲ್ಲಿ ಭತ್ತವನ್ನು ತುಂಬಿಸಿಕೊAಡು ತಂದು ಉಗ್ರಾಣದಲ್ಲಿ ಹಾಕಿದರು.
ಕುಶಾಲನಗರ ತಾಲೂಕಿನ ೭೪ ರೈತರಲ್ಲಿ ೩೫ ಜನ ರೈತರಿಂದ ೭೮೬ ಕ್ವಿಂಟಾಲ್ ಭತ್ತವನ್ನು ಖರೀದಿಸಲಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ ೯೯ ಜನ ರೈತರಲ್ಲಿ ೩೪ ಜನ ರೈತರಿಂದ ೧,೧೧೮ ಕ್ವಿಂಟಾಲ್ ಭತ್ತವನ್ನು ಖರೀದಿ ಮಾಡಲಾಗಿದೆ. ಸಾಮಾನ್ಯ ಭತ್ತಕ್ಕೆ ರೂ. ೨,೦೪೦, ಗ್ರೇಡ್ ಎ ಭತ್ತಕ್ಕೆ ರೂ. ೨,೦೬೦ ನಿಗದಿ ಮಾಡಲಾಗಿದೆ.
ಇದೇ ರೀತಿಯಲ್ಲಿ ರಾಗಿ ಖರೀದಿಗೆ ಎರಡು ಮಂದಿ ರೈತರು ನೋಂದಣಿ ಮಾಡಿರುತ್ತಾರೆ. ರಾಗಿಗೆ ಬೆಂಬಲ ಬೆಲೆಯಾಗಿ ರೂ. ೩,೫೭೮ ನಿಗದಿಯಾಗಿದೆ. ಖರೀದಿಯ ಏಜೆನ್ಸಿಯಾಗಿ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಬೆಂಗಳೂರು ಕೆಲಸ ನಿರ್ವಹಿಸಲಿದೆ. ಖರೀದಿಯ ಅವಧಿಯು ೩೧-೩-೨೦೨೩ ರವರೆಗೆ ಆಗಿರುತ್ತದೆ ಎಂದು ಜಿಲ್ಲಾ ಖರೀದಿ ಅಧಿಕಾರಿ ಸೋಮಯ್ಯ ತಿಳಿಸಿದ್ದಾರೆ.
ಕೇಂದ್ರದ ಉದ್ಘಾಟನೆ ಸಂದರ್ಭ ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ರವಿಕುಮಾರ್, ಕುಶಾಲನಗರ ಖರೀದಿ ಕೇಂದ್ರದ ಅಧಿಕಾರಿ ರಾಜುತಿಪ್ಪೆ ಶೆಟ್ಟಿ, ಸೋಮವಾರಪೇಟೆ ಕೇಂದ್ರದ ಅಧಿಕಾರಿ ಮಂಜುನಾಥ ವಡೆಯರ್, ಸಿಬ್ಬಂದಿ ವರ್ಗದವರು ಹಾಜರಿದ್ದರು.