ಮಡಿಕೇರಿ, ಫೆ. ೧೩: ರಾಜ್ಯ ಕಂದಾಯ ಸಚಿವರಾದ ಆರ್. ಅಶೋಕ್ ಅವರು ಇತ್ತೀಚೆಗೆ ಕೊಡಗಿನ ಜಮ್ಮಾ ಜಾಗ ಸೇರಿದಂತೆ ರಾಜ್ಯದÀ ವಿವಿಧ ವಿಶೇಷ ಹಕ್ಕಿನ ಜಮೀನುಗಳನ್ನು ೫ ಎಕರೆಗೆ ಮೀರದಂತೆ ಗುತ್ತಿಗೆ ನೀಡುವ ಅವಕಾಶ ಕಲ್ಪಿಸಲಾಗಿದೆ ಎಂದು ನೀಡಿರುವ ಹೇಳಿಕೆ ಕೊಡಗಿನ ಮಟ್ಟಿಗೆ ಆತಂಕಕಾರಿಯಾಗಿದ್ದು ಇದು ಖಂಡನೀಯ ಎಂದು ಮಾಜಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ಹೇಳಿದ್ದಾರೆ.

ಈ ಬಗ್ಗೆ ‘ಶಕ್ತಿ’ಗೆ ಹೇಳಿಕೆ ನೀಡಿರುವ ಅವರು ಕೊಡಗಿನ ಜಮ್ಮಾ ಜಾಗ ಎಂಬದು ಸರಕಾರದ ಆಸ್ತಿಯಲ್ಲ ಇದು ವಿಭಿನ್ನ ರೀತಿಯ ಹಕ್ಕಿನ ಜಾಗವಾಗಿದ್ದು, ಲೀಸ್‌ಗೆ ನೀಡುವ ಜಮೀನುಗಳ ಪೈಕಿ ಜಮ್ಮಾಬಾಣೆಯನ್ನು ಉಲ್ಲೇಖಿಸಿರುವುದು ಸಾಕಷ್ಟು ಗೊಂದಲ ಮೂಡಿಸಿದೆ, ಜಿಲ್ಲೆಯ ಜನರು ಈ ಬಗ್ಗೆ ಆತಂಕಪಡುವAತಾಗಿದೆ ಎಂದಿದ್ದಾರೆ. ಇದು ಸರಕಾರಿ ಜಾಗವಲ್ಲ, ಈ ಬಗ್ಗೆ ಈಗಾಗಲೇ ಸರಕಾರದ ಮೂಲಕ ತಿದ್ದುಪಡಿಯೂ ಆಗಿದೆ. ಸಾಕಷ್ಟು ಜಮೀನುಗಳು ಇನ್ನೂ ಕಂದಾಯ ನಿಗದಿಗೆ ಬಾಕಿ ಉಳಿದಿದ್ದು, ಜನರು ಈ ಪ್ರಯತ್ನದ ಸಮಸ್ಯೆಯಲ್ಲಿದ್ದಾರೆ. ಇಂತಹ ಸಂದರ್ಭ ಕಂದಾಯ ಸಚಿವರು ನೀಡಿರುವ ಈ ಹೇಳಿಕೆ ಬಗ್ಗೆ ಜನರು ಮತ್ತೆ ಸಂದಿಗ್ಧತೆ ಎದುರಿಸುವಂತಾಗಿದೆ ಎಂದು ವೀಣಾ ಅಚ್ಚಯ್ಯ ಅಭಿಪ್ರಾಯಪಟ್ಟಿದ್ದಾರೆ.

ಪ್ರಸ್ತುತ ವಿಧಾನಸಭಾ ಅಧಿವೇಶನವೂ ಆರಂಭಗೊAಡಿದ್ದು, ಇಲ್ಲಿ ಜಿಲ್ಲೆಯ ಶಾಸಕರು ಕಂದಾಯ ಸಚಿವರಲ್ಲಿ ಈ ಬಗ್ಗೆ ಪ್ರಶ್ನಿಸಿ ಸೂಕ್ತ ಸಮಜಾಯಿಷಿಕೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಜಮ್ಮಾ ಹಾಗೂ ಬಾಣೆ ಜಮೀನು ಸರಕಾರದ ಸ್ವತ್ತಲ್ಲ ಹೀಗಿರುವಾಗ ಇದನ್ನೂ ಲೀಸ್ ಆಧಾರದಲ್ಲಿ ನೀಡುವ ತೀರ್ಮಾನ ಕೈಗೊಳ್ಳಲಾಗಿದೆ ಎಂಬ ಹೇಳಿಕೆ ಬಾಲಿಶವಾಗಿದೆ. ಈ ವಿಚಾರದಲ್ಲಿ ಜನತೆಗೆ ಸ್ಪಷ್ಟತೆ ಸಿಗಬೇಕಿದೆ ಎಂದು ವೀಣಾ ಅಚ್ಚಯ್ಯ ಒತ್ತಾಯಪಡಿಸಿದ್ದಾರೆ.