ಸೋಮವಾರಪೇಟೆ, ಫೆ. ೧೨: ಪರಿಸರಕ್ಕೆ ಹೆಚ್ಚು ಮಾರಕವಾಗಿರುವ ಇ-ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಉದ್ದೇಶದಿಂದ ಲಯನ್ಸ್ ಸಂಸ್ಥೆ ಉಪಯುಕ್ತ ಕ್ರಮ ಕೈಗೊಂಡಿದ್ದು, ತಾ. ೧೩ ರಂದು (ಇಂದು) ಸೋಮವಾರಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ಇ-ತ್ಯಾಜ್ಯ ಸಂಗ್ರಹಣೆ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಸಿ.ಕೆ. ರೋಹಿತ್ ತಿಳಿಸಿದರು.
ಇಲ್ಲಿನ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರ ಮನೆಯಲ್ಲೂ ತ್ಯಾಜ್ಯದ ಪ್ರಮಾಣ ಹೆಚ್ಚುತ್ತಿದೆ. ಉಪಯೋಗಕ್ಕೆ ಬಾರದೆ ಇರುವಂತಹ ಎಲೆಕ್ಟಾçನಿಕ್ ವಸ್ತುಗಳು, ಕಂಪ್ಯೂಟರ್ ಬಿಡಿ ಭಾಗಗಳು, ಕೆಟ್ಟು ಹೋಗಿರುವ ಎಲೆಕ್ಟಿçಕಲ್ ಉಪಕರಣಗಳು, ಮೊಬೈಲ್ಗಳು ಇತ್ಯಾದಿ ವಸ್ತುಗಳಿಂದ ಪರಿಸರ ಮಾಲಿನ್ಯದ ಜೊತೆಗೆ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ ಎಂದರು.
ಸೋಮವಾರಪೇಟೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ಜನತೆಗೆ ಉಪಯೋಗ ಕಲ್ಪಿಸುವ ನಿಟ್ಟಿನಲ್ಲಿ ತಾ. ೧೩ ರಂದು ಬೆಳಿಗ್ಗೆ ೯ ರಿಂದ ಸಂಜೆ ೪ ರವರೆಗೆ ಪಟ್ಟಣದ ಆಯ್ದ ಕಡೆಗಳಲ್ಲಿ ಇ-ತ್ಯಾಜ್ಯ ಸಂಗ್ರಹಿಸಲಾಗುವುದು. ಸೋಮವಾರಪೇಟೆಯ ಬಸವೇಶ್ವರ ರಸ್ತೆಯ ಎಸ್ಜೆಎಂ ಬಾಲಕಿಯರ ಪ್ರೌಢಶಾಲೆ ಬಳಿ, ಆನೆಕೆರೆ ಸಮೀಪವಿರುವ ಶ್ರೀ ಶಿವಕುಮಾರಸ್ವಾಮೀಜಿ ಬಸ್ ತಂಗುದಾಣದ ಬಳಿ, ಕಕ್ಕೆಹೊಳೆ ಜಂಕ್ಷನ್ ಹಾಪ್ಕಾಮ್ಸ್ ಸಮೀಪ, ತ್ಯಾಗರಾಜ ರಸ್ತೆಯ ಗಾಂಧಿ ವೃತ್ತದ ಸಮೀಪ ಇರುವ ಪೆಟ್ರೋಲ್ ಬಂಕ್ ಬಳಿ ಇ-ತ್ಯಾಜ್ಯ ಸಂಗ್ರಹಿಸಲಾಗುವುದು ಎಂದರು.
ಸಾರ್ವಜನಿಕರು ತಮ್ಮ ಮನೆ, ಅಂಗಡಿ ಮುಂಗಟ್ಟುಗಳಲ್ಲಿ ಶೇಖರಿಸಿಟ್ಟಿರುವ ಇ-ತ್ಯಾಜ್ಯವನ್ನು ನಿಗದಿತ ಸ್ಥಳಗಳಿಗೆ ತಂದು ವಿಲೇವಾರಿ ಮಾಡಬಹುದು ಎಂದರು. ಗೋಷ್ಠಿಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಕೆ.ಎನ್. ತೇಜಸ್ವಿ, ಖಜಾಂಚಿ ಜಿ.ಟಿ. ಯೋಗೇಂದ್ರ, ಸಿ.ಕೆ. ಮಲ್ಲಪ್ಪ, ಬಿದ್ದಾಟಂಡ ಪವನ್ ಉಪಸ್ಥಿತರಿದ್ದರು.