ಸೋಮವಾರಪೇಟೆ, ಫೆ. ೧೧: ಪಾಳೆಗಾರರ ನಾಡು, ಐತಿಹಾಸಿಕ ಹೊನ್ನಮ್ಮನ ಕೆರೆ ಇರುವ ನೆಲೆ, ಗದ್ದೆ-ತೋಟಗಳ ಹಚ್ಚ ಹಸಿರಿನ ತಾಣ, ಕಣ್ಹಾಯಿಸಿದರೆ ಪ್ರಾಕೃತಿಕ ಸಿರಿ ಸಂಪತ್ತಿನ ನೋಟ.., ಮಳೆ ಕರುಣಿಸುವ ದೇವರೆಂದೇ ಹೆಸರಾದ ಮಳೆ ಮಲ್ಲೇಶ್ವರ ಬೆಟ್ಟದ ವಿಹಂಗಮ ತಾಣ ಕಂಡುಬರುವ ಕೃಷಿ ಪ್ರಧಾನ ಗ್ರಾಮವಾದ ಗೌಡಳ್ಳಿಯಲ್ಲಿ ನಡೆದ
ಕನ್ನಡ ನುಡಿ ಹಬ್ಬದ ಸಂಭ್ರಮ ಕನ್ನಡಾಭಿಮಾನಿಗಳ ಸಮ್ಮಿಲನಕ್ಕೆ ಸಾಕ್ಷಿಯಾಯಿತು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ಸೋಮವಾರಪೇಟೆ ತಾಲೂಕು ೮ನೇ ಕನ್ನಡ ಸಾಹಿತ್ಯ ಸಮ್ಮೇಳನವು ಸಹಸ್ರಾರು ಕನ್ನಡ ಮನಗಳ ಸಮ್ಮಿಲನದೊಂದಿಗೆ ಸಂಭ್ರಮದ ನುಡಿಹಬ್ಬಕ್ಕೆ ಮುನ್ನುಡಿ ಬರೆಯಿತು.
ತಾಲೂಕು ಕಸಾಪ ಪದಾಧಿಕಾರಿ ಗಳೊಂದಿಗೆ ಗೌಡಳ್ಳಿ ಹಾಗೂ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳ ಗ್ರಾಮಸ್ಥರು, ರೈತಾಪಿ ವರ್ಗದವರು ಕನ್ನಡದ ಹಬ್ಬವನ್ನು ಯಶಸ್ವಿಗೊಳಿಸಲು ಶಕ್ತಿಮೀರಿ ತೊಡಗಿಸಿಕೊಂಡ ಪರಿಣಾಮ ೮ನೇ ಕನ್ನಡ ಸಾಹಿತ್ಯ ಸಮ್ಮೇಳನ ಅರ್ಥಪೂರ್ಣವಾಗಿ ನೆರವೇರಿತು. ಸಮ್ಮೇಳನಾಧ್ಯಕ್ಷರ ಮೆರವಣಿಗೆಯು ಬೀಟಿಕಟ್ಟೆ
(ಮೊದಲ ಪುಟದಿಂದ) ಕೆನರಾ ಬ್ಯಾಂಕ್ ಮುಂಭಾಗದಿAದ ಹೊರಟು ಗೌಡಳ್ಳಿ ಮುಖ್ಯರಸ್ತೆಯಲ್ಲಿ ಸಾಗಿ ಸಮ್ಮೇಳನ ಆಯೋಜನೆಗೊಂಡಿದ್ದ ಬಿಜಿಎಸ್ ಶಾಲಾ ಮೈದಾನದಲ್ಲಿ ಸಮಾಪನಗೊಂಡಿತು.
ಸಮ್ಮೇಳನಾಧ್ಯಕ್ಷೆಯಾದ ಶ.ಗ. ನಯನತಾರಾ ಅವರನ್ನು ಅಲಂಕೃತ ಮಂಟಪದಲ್ಲಿ ಅದ್ದೂರಿ ಮೆರವಣಿಗೆ ಮೂಲಕ ಸಮ್ಮೇಳನಕ್ಕೆ ಕರೆ ತರಲಾಯಿತು. ಈ ಸಂದರ್ಭ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್, ತಾಲೂಕು ಅಧ್ಯಕ್ಷ ಎಸ್.ಡಿ. ವಿಜೇತ್ ಅವರುಗಳು ಸಮ್ಮೇಳನಾಧ್ಯಕ್ಷ ರೊಂದಿಗೆ ಆಗಮಿಸಿದರು.
ಮಂಗಳವಾದ್ಯ, ಪೂರ್ಣ ಕುಂಭಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪಟ ಕುಣಿತ, ವೀರಗಾಸೆ, ಸ್ತಿçà ಶಕ್ತಿ ಸ್ವಸಹಾಯ ಸಂಘಗಳ ಸದಸ್ಯರು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು, ವಿಶ್ವಮಾನವ ಕುವೆಂಪು ಶಾಲೆಯ ಬ್ಯಾಂಡ್ಸೆಟ್ ತಂಡ, ಸಂಘ ಸಂಸ್ಥೆಗಳ ಪ್ರಮುಖರು, ಗ್ರಾಮಸ್ಥರು, ಕನ್ನಡಾಭಿಮಾನಿಗಳು ಮೆರವಣಿಗೆಯಲ್ಲಿ ಭಾಗಿಯಾಗುವ ಮೂಲಕ ಕನ್ನಡದ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದರು.
ಸಮ್ಮೇಳನ ಹಿನ್ನೆಲೆ ಗೌಡಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ತಮ್ಮ ಗ್ರಾಮಗಳ ಪ್ರಮುಖ ಸಂಪರ್ಕ ರಸ್ತೆಗಳಿಗೆ ಸಾಧಕರ ಹೆಸರನ್ನಿಟ್ಟು ದ್ವಾರಗಳನ್ನು ನಿರ್ಮಿಸಿ ಅವರುಗಳ ಸೇವೆಯನ್ನು ಸ್ಮರಿಸಲಾಯಿತು.
ಬೆಳಿಗ್ಗೆ ದೊಡ್ಡಮಳ್ತೆ ಶ್ರೀ ಹೊನ್ನಮ್ಮನ ಕೆರೆಯಿಂದ ಬೈಕ್ ಜಾಥ ನಡೆಯಿತು. ನಂತರ ತಹಶೀಲ್ದಾರ್ ಎಸ್.ಎನ್. ನರಗುಂದ್ ಅವರು ಬಿಜಿಎಸ್ ಶಾಲಾ ಆವರಣದಲ್ಲಿ ರಾಷ್ಟç ಧ್ವಜಾರೋಹಣ ನೆರವೇರಿಸಿದರು. ಕ.ಸಾ.ಪ. ಜಿಲ್ಲಾಧ್ಯಕ್ಷರಾದ ಎಂ.ಪಿ. ಕೇಶವಕಾಮತ್ ಅವರು ಕನ್ನಡ ಧ್ಜಜ ಹಾಗೂ ತಾಲೂಕು ಅಧ್ಯಕ್ಷ ಎಸ್.ಡಿ. ವಿಜೇತ್ ಅವರು ಕನ್ನಡ ಪರಿಷತ್ ಧ್ವಜಾರೋಹಣ ನೆರವೇರಿಸಿದರು.
ಹಾರಳ್ಳಿ ಶ್ರೀ ಚನ್ನಕೇಶವ ಸ್ವಾಮಿ ನೆನಪಿನ ದ್ವಾರವನ್ನು ಹಾರಳ್ಳಿ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಹೂವಣ್ಣ, ಹಿರಿಕರ ದಿ.ಜಿ.ಎ. ಸುಬ್ಬೇಗೌಡರ ನೆನಪಿನ ದ್ವಾರವನ್ನು ಜಿ.ಡಿ.ದಾಮೋದÀರ್, ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ನೆನಪಿನ ದ್ವಾರವನ್ನು ಬೀಟಿಕಟ್ಟೆ ಯುವಕ ಸಂಘದ ಜಯಾನಂದ, ಶ್ರೀ ಚೌಡೇಶ್ವರಿ ಯುವಕ ಸಂಘದ ನೆನಪಿನ ದ್ವಾರವನ್ನು ಮಧು, ದಿ.ವೆಂಕಟರಮಣಾಚಾರ್ಯ ನೆನಪಿನ ದ್ವಾರವನ್ನು ಬಿ.ಪಿ.ಮೊಗಪ್ಪ, ಪುಲಿಗೇರಿ ಬಸವೇಶ್ವರ ಸ್ವಾಮಿ ನೆನಪಿನ ದ್ವಾರವನ್ನು ಹರಪಳ್ಳಿ ರವೀಂದ್ರ, ಪಿ.ಕೆ.ರವಿ, ಬಿ.ಎಸ್.ಸುಂದರ್, ಜಿ.ಪಿ.ಸುನಿಲ್ ಅವರುಗಳು ಉದ್ಘಾಟಿಸಿದರು.
ದಿ.ಗುರಪ್ಪ ಮಾಸ್ಟರ್ ನೆನಪಿನ ದ್ವಾರವನ್ನು ಗಿರಿಜ ಗುರಪ್ಪ, ದೊಡ್ಡಮಳ್ತೆ ಶ್ರೀ ಹೊನ್ನಮ್ಮ ತಾಯಿ ಪುಣ್ಯಕ್ಷೇತ್ರ ದ್ವಾರವನ್ನು ದೇವಾಲಯ ಸಮಿತಿ ಅಧ್ಯಕ್ಷ ವೀರೇಶ್, ಹಣಕೋಡು ಶ್ರೀ ಬಸವೇಶ್ವರ ಸ್ವಾಮಿ ನೆನಪಿನ ದ್ವಾರವನ್ನು ಡಿ.ಎಸ್. ಚಂದ್ರಪ್ಪ, ಕೂಗೇಕೋಡಿ ಕನ್ನಂಬಾಡಿಯಮ್ಮ ನೆನಪಿನ ದ್ವಾರವನ್ನು ಕೆ.ಬಿ.ಚಂದ್ರಶೇಖರ್, ದಿ.ವಿ.ಟಿ.ಈರಪ್ಪ ಅವರ ನೆನಪಿನ ಮುಖ್ಯದ್ವಾರವನ್ನು ಮುಖ್ಯಶಿಕ್ಷಕಿ ಮಿಲ್ಗ್ರೆಡ್ ಗೋನ್ಸಾಲ್ವೆಸ್ ಉದ್ಘಾಟಿಸಿದರು.
ಸಮ್ಮೇಳನ ಆಯೋಜನೆಗೊಂಡಿದ್ದ ಬಿಜಿಎಸ್ ಶಾಲಾ ಆವರಣ ಪ್ರವೇಶ ದ್ವಾರಕ್ಕೆ ದಿ.ವಿ.ಟಿ. ಈರಪ್ಪ ಅವರ ಹೆಸರನ್ನಿಡುವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಕೊಡುಗೆಯನ್ನು ಸ್ಮರಿಸಲಾಯಿತು.
ಇದರೊಂದಿಗೆ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ನೆನಪಿನ ದ್ವಾರ ನಿರ್ಮಿಸಿ ರಾಷ್ಟçಕ್ಕೆ ಸಲ್ಲಿಸಿದ ಸೇವೆಯ ನೆನಪು ಮಾಡಿಕೊಡಲಾಯಿತು. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಹೆಸರಿನಲ್ಲಿ ಮುಖ್ಯ ವೇದಿಕೆ ನಿರ್ಮಿಸಿ ಕನ್ನಡ ಹಬ್ಬದ ಸಂಭ್ರಮಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಸಮ್ಮೇಳನದ ವೇದಿಕೆಯ ಸಮೀಪ ತೆರೆಯಲಾಗಿದ್ದ ಮಳಿಗೆಗಳು ಸಾಹಿತ್ಯಾಸಕ್ತರ ಗಮನ ಸೆಳೆಯಿತು. ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಿAದ ನೂರಾರು ಮಂದಿಗೆ ಉಚಿತವಾಗಿ ರಕ್ತದೊತ್ತಡ ಹಾಗೂ ಮಧುಮೇಹ ಪರೀಕ್ಷೆ ನಡೆಸಲಾಯಿತು. ಕನ್ನಡ ಪುಸ್ತಕಗಳು, ಗುಡಿ ಕೈಗಾರಿಕೆ, ಗೃಹೋಪಯೋಗಿ ವಸ್ತುಗಳು, ಕೃಷಿ ವಸ್ತು ಪ್ರದರ್ಶನ ಮಳಿಗೆ ಗಮನ ಸೆಳೆದವು. ಮಳಿಗೆಗಳನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಉದ್ಘಾಟಿಸಿದರು.
ನಂತರ ಸಮ್ಮೇಳನದ ಉದ್ಘಾಟನೆ, ಸ್ಮರಣ ಸಂಚಿಕೆ ಬಿಡುಗಡೆ, ಪುಸ್ತಕಗಳ ಬಿಡುಗಡೆ, ಗೀತಾಗಾಯನ, ವಿಚಾರಗೋಷ್ಠಿ, ಬಹಿರಂಗ ಅಧಿವೇಶನ, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ ಗಳೊಂದಿಗೆ ಸಮಾರೋಪ ಸಮಾರಂಭ ನಡೆಯುವ ಮೂಲಕ ೮ನೇ ಸಾಹಿತ್ಯ ಸಮ್ಮೇಳನ ಅರ್ಥಪೂರ್ಣವಾಗಿ ಜರುಗಿತು.
- ವಿಜಯ್ ಹಾನಗಲ್