ಗೋಣಿಕೊಪ್ಪ ವರದಿ, ಫೆ. ೧೦: ಅಶ್ವಿನಿ ಸ್ಪೋರ್ಟ್ಸ್ ಫೌಂಡೇಷನ್ ವತಿಯಿಂದ ಕಾಲ್ಸ್ ಅಥ್ಲೆಟಿಕ್ಸ್ ಮೈದಾನ ದಲ್ಲಿ ಆಯೋಜಿಸಿದ್ದ ಮೂರನೇ ವರ್ಷದ ಜಿಲ್ಲಾಮಟ್ಟದ ಅಥ್ಲೆಟಿಕ್ ಚಾಂಪಿಯನ್ ಶಿಪ್‌ನಲ್ಲಿ ಆರು ಕ್ರೀಡಾ ಪಟುಗಳು ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.

೧೨, ೧೪ ಮತ್ತು ೧೬ ವಯೋಮಿತಿಗೆ ಸ್ಪರ್ಧೆ ನಡೆಯಿತು. ಜಿಲ್ಲೆಯ ವಿವಿಧ ಶಾಲೆಗಳಿಂದ ೨೫೦ಕ್ಕೂ ಹೆಚ್ಚು ಕ್ರೀಡಾ ಪಟುಗಳು ಓಟದಲ್ಲಿ ಪಾಲ್ಗೊಂಡರು. ೧೬ ವಯೋಮಿತಿಯ ಬಾಲಕರಲ್ಲಿ ಯೂನಿಕ್ ಸ್ಪೋರ್ಟ್ಸ್ ಕ್ಲಬ್‌ನ ಎಂ.ಎನ್. ವಿಪುಲ್, ಬಾಲಕಿಯರಲ್ಲಿ ಕಾಲ್ಸ್ ಶಾಲೆಯ ಎ.ಎಸ್. ಗಗನ, ೧೪ ವಯೋಮಿತಿಯ ಬಾಲಕರಲ್ಲಿ ಭಾರತೀಯ ವಿದ್ಯಾ ಭವನದ ವಿ.ಐ. ಇರ್ಷಾನ್, ಬಾಲಕಿಯರಲ್ಲಿ ಎಂ.ಕೆ. ನೀಲಮ್ಮ, ೧೨ ವಯೋಮಿತಿ ಬಾಲಕರಲ್ಲಿ ಕಾಲ್ಸ್ ಶಾಲೆಯ ಜನೀಶ್ ಅಪ್ಪಯ್ಯ, ಬಾಲಕಿಯರಲ್ಲಿ ವಿದ್ಯಾನಿಕೇತನ ಶಾಲೆಯ ಬೀಂಕಾ ಕಾರ್ಯಪ್ಪ ಚಾಂಪಿಯನ್ ಆಗಿ ಹೊರ ಹೊಮ್ಮಿದರು. ಅಶ್ವಿನಿ ಸ್ಪೋರ್ಟ್ಸ್ ಫೌಂಡೇಷನ್ ಮುಖ್ಯಸ್ಥೆ ಅಶ್ವಿನಿ ನಾಚಪ್ಪ, ಕಾಲ್ಸ್ ಶಾಲೆ ಮುಖ್ಯಸ್ಥ ದತ್ತ ಕರುಂಬಯ್ಯ ಇದ್ದರು.