ಕುಶಾಲನಗರ, ಫೆ. ೧೦: ಅತೀ ಶೀಘ್ರ ಬೆಳವಣಿಗೆ ಕಂಡ ಕುಶಾಲನಗರ ಪಟ್ಟಣದಲ್ಲಿ ಭೂಮಿಯ ಬೆಲೆ ಏರಿಕೆ ನಡುವೆ ಸಾರ್ವಜನಿಕ ಉಪಯೋಗಕ್ಕೆಂದು ಮೀಸಲಿರಿಸಿರುವ ಜಾಗಗಳು ಖಾಸಗಿ ಸ್ವತ್ತಾಗಿ ಪರಿವರ್ತನೆಯಾಗುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ.

ಈ ಮೂಲಕ ಸರ್ಕಾರಕ್ಕೆ ಸೇರಿದ ಕೋಟಿಗಟ್ಟಲೇ ಮೌಲ್ಯದ ಆಸ್ತಿ ಭೂ ಮಾಫಿಯಾ ದಂಧೆಕೋರರ ಪಾಲಾಗುತ್ತಿದ್ದು, ಯಾವುದೇ ಸಾರ್ವಜನಿಕ ಸೌಲಭ್ಯಕ್ಕೆ ಅವಶ್ಯಕತೆ ಇರುವ ಜಾಗಕ್ಕೆ ಕೊರತೆ ಎದುರಿಸುವಂತಾಗಿದೆ. ಪಟ್ಟಣ ಮೇಲ್ದರ್ಜೇಗೇರಿದರೂ, ನಾಗರಿಕರಿಗೆ ಅವಶ್ಯಕತೆ ಇರುವ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಇದರಿಂದ ಪಟ್ಟಣದ ಕೇಂದ್ರ ಭಾಗದಲ್ಲಿ ವಾಹನ ಸಂಚಾರ ಮತ್ತು ಜನಜೀವನ ಬಹುತೇಕ ಏರುಪೇರಾಗುವಂತಾಗಿದೆ.

ಕುಶಾಲನಗರ ಪುರಸಭೆಯ ನಗರದ ಹೃದಯ ಭಾಗದಲ್ಲಿರುವ ಖಾಸಗಿ ಬಸ್ ನಿಲ್ದಾಣ ಮತ್ತು ಕನ್ನಡ ಭಾರತಿ ಕಾಲೇಜು ನಡುವೆ ಇರುವ ಕುಂಬಾರ ಗುಂಡಿ ಎಂಬ ಹೆಸರಿನ ಅಂದಾಜು ರೂ. ೨೫ ರಿಂದ ೩೦ ಕೋಟಿ ಬೆಲೆ ಬಾಳುವ ೨ ಎಕರೆ ಪ್ರದೇಶ ಇದೀಗ ಮತ್ತೆ ಖಾಸಗಿ ಪಾಲಾಗುವ ಆತಂಕ ಜನರಲ್ಲಿ ಮೂಡಿ ಬಂದಿದೆ. ಈ ಪ್ರದೇಶದಲ್ಲಿ ಕಂಡು ಬಂದಿರುವ ಹಳ್ಳವನ್ನು ಕಲ್ಲು ಮಣ್ಣುಗಳಿಂದ ಮುಚ್ಚಲಾಗುತ್ತಿದ್ದು, ಸರ್ಕಾರಿ ಒಡೆತನದ ಜಾಗವನ್ನು ಕೂಡಲೇ ಸಂರಕ್ಷಣೆ ಮಾಡುವಲ್ಲಿ ಸ್ಥಳೀಯ ಆಡಳಿತ ಮುಂದಾಗಬೇಕಾಗಿದೆ ಎಂದು ನಾಗರಿಕರು ಆಗ್ರಹಿಸಿದ್ದಾರೆ.

ಈ ಹಿಂದೆ ಈ ಜಾಗದಲ್ಲಿ ಸರ್ವೆ ಕಾರ್ಯ ನಡೆದಿದ್ದು, ಸಮರ್ಪಕ ದಾಖಲೆಗಳ ಕೊರತೆಯೊಂದಿಗೆ ಸರ್ವೆ ಅಧಿಕಾರಿಗಳು ತಪ್ಪು ಮಾಹಿತಿ ನೀಡಿರುವ ಬಗ್ಗೆ ಆರೋಪ ವ್ಯಕ್ತಗೊಂಡಿದೆ. ಕೋಟಿಗಟ್ಟಲೆ ಬೆಲೆಬಾಳುವ ಈ ಸರಕಾರಿ ಜಾಗವನ್ನು ಖಾಸಗಿ ಸ್ವತ್ತಾಗದಂತೆ ಸಂರಕ್ಷಣೆ ಮಾಡಬೇಕಾಗಿದೆ ಎನ್ನುತ್ತಾರೆ ಪುರಸಭೆ ಸದಸ್ಯರುಗಳಾದ ವಿ.ಎಸ್. ಆನಂದ್ ಕುಮಾರ್ ಮತ್ತು ಜಗದೀಶ್. ಈ ವಿಷಯದ ಬಗ್ಗೆ ಈಗಾಗಲೇ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಈ ಬಗ್ಗೆ ಎಡಿಎಲ್‌ಆರ್ ಸರ್ವೆಗೆ ಸಂಬAಧಿಸಿದ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಪುರಸಭೆ ಅಧ್ಯಕ್ಷ ಜಯವರ್ಧನ್ ‘ಶಕ್ತಿ’ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಸಕ್ತ ಈ ಪ್ರದೇಶದಲ್ಲಿ ಒಳಚರಂಡಿ ಯೋಜನೆಯ ಶುದ್ಧೀಕರಣ ಘಟಕವೊಂದು ನಿರ್ಮಾಣವಾಗುತ್ತಿದ್ದು, ಉಳಿದಂತೆ ಪಟ್ಟಣದ ಅಭಿವೃದ್ಧಿ ಯೋಜನೆಗಳಿಗೆ ಸ್ಥಳವನ್ನು ಕಾಯ್ದಿರಿಸಲಾಗುವುದು ಎಂದು ಅವರು ಹೇಳಿದ್ದಾರೆ.

- ಚಂದ್ರಮೋಹನ್