ಸೋಮವಾರಪೇಟೆ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ತಾ.೧೧ರಂದು(ಇAದು) ಗೌಡಳ್ಳಿಯಲ್ಲಿ ನಡೆಯುವ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವನ್ನು ಆಹ್ವಾನಿಸದೆ ಕಡೆಗಣಿಸಿದ್ದು, ಈ ಹಿನ್ನೆಲೆ ಸಮ್ಮೇಳನದಲ್ಲಿ ಸದಸ್ಯರುಗಳು ಭಾಗವಹಿಸುತ್ತಿಲ್ಲವೆಂದು ಸಂಘದ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಪ್ರದೀಪ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದಿಂದ ಮಾನ್ಯತೆ ಪಡೆದಿರುವ ಸರ್ಕಾರಿ ನೌಕರರ ಸಂಘ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘವನ್ನು ಸರ್ಕಾರಿ ಕಾರ್ಯಕ್ರಮಗಳಿಗೆ ಆಹ್ವಾನಿಸಬೇಕೆಂಬ ನಿಯಮವಿದೆ. ಆದರೂ ನಮ್ಮನ್ನು ಆಹ್ವಾನಿಸಿಲ್ಲ ಎಂದು ಆರೋಪಿಸಿದರು.

ಕುಶಾಲನಗರದಲ್ಲಿ ಇತ್ತೀಚೆಗೆ ನಡೆದ ಸಮ್ಮೇಳನಕ್ಕೂ ಆಹ್ವಾನಿಸಿಲ್ಲ. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಲಾಗಿದೆ. ಆದಾಗ್ಯೂ ಸೋಮವಾರಪೇಟೆ ಸಮ್ಮೇಳನಕ್ಕೂ ಆಹ್ವಾನ ನೀಡದೇ ನಿರ್ಲಕ್ಷö್ಯವಹಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಹೇಳಿದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಕನ್ನಡಿಗರಲ್ಲವೇ? ಎಂದು ಪ್ರಶ್ನಿಸಿದ ಪ್ರದೀಪ್, ಒಂದು ವೇಳೆ ಸಂಘಕ್ಕೆ ಆಹ್ವಾನ ನೀಡಿದ್ದರೆ ತನು, ಮನ, ಧನದ ಸಹಕಾರ ನೀಡುತ್ತಿದ್ದೆವು. ಆದರೆ ಆಯೋಜಕರು ಗುಂಪುಗಾರಿಕೆ ಮಾಡಿಕೊಂಡು ಕಾರ್ಯಕ್ರಮ ನಡೆಸುತ್ತಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಎಲ್ಲರ ಸಹಕಾರದೊಂದಿಗೆ ಕನ್ನಡದ ಹಬ್ಬ ನಡೆದರೆ ಹೆಚ್ಚು ಅರ್ಥವಿರುತ್ತದೆ ಎಂದು ಅಭಿಪ್ರಾಯಿಸಿದರು. ಗೋಷ್ಠಿಯಲ್ಲಿ ಪ್ರೌಢಶಾಲಾ ಸಹಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಡಿ.ಪಿ.ಧರ್ಮಪ್ಪ, ಸರ್ಕಾರಿ ನೌಕರರ ಸಂಘದ ಖಜಾಂಚಿ ಬಿ.ಜಿ.ದಿನೇಶ್, ಕಾರ್ಯದರ್ಶಿ ಎನ್.ಎಂ.ನಾಗೇಶ್, ಸಂಘಟನಾ ಕಾರ್ಯದರ್ಶಿ ಎಸ್.ಆರ್.ಗೋಪಿನಾಥ್ ಇದ್ದರು.