ಸೋಮವಾರಪೇಟೆ, ಫೆ. ೧೧: ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಮೀಪದ ಗೌಡಳ್ಳಿ ಬಿಜಿಎಸ್ ಶಾಲಾ ಆವರಣದಲ್ಲಿ ಆಯೋಜಿಸಿದ್ದ ೮ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ, ಪತ್ರಕರ್ತೆಯೂ ಆಗಿರುವ ಶ.ಗ. ನಯನತಾರಾ ಅವರು ತಾಲೂಕಿನಲ್ಲಿ ಇಂದಿಗೂ ಬೀಡುಬಿಟ್ಟಿರುವ ಹಲವಷ್ಟು ಸಮಸ್ಯೆಗಳ ಬಗ್ಗೆ ತಮ್ಮ ಮಾತಿನಲ್ಲಿ ಬೆಳಕು ಚೆಲ್ಲಿದರು.
ಕನ್ನಡ ಸಾಹಿತ್ಯ, ಭಾಷೆ, ಬರವಣಿಗೆಯ ಮಹತ್ವದೊಂದಿಗೆ ತಾಲೂಕಿನ ಸಮಸ್ಯೆಗಳತ್ತಲೂ ಕಣ್ಹಾಯಿಸಿದ ನಯನತಾರಾ ಅವರು, ಇಂದು ಹೊನ್ನು ಬೆಳೆಯುವ ಭೂಮಿ ರೈತನಿಗೆ ಭಾರವಾಗುತ್ತಿದೆ. ಮಹಾತ್ಮಾಗಾಂಧಿ ಅವರ ವಿಚಾರ ಧಾರೆಗಳನ್ನು ಮರೆತಿದ್ದರಿಂದ ರೈತರ ಬದುಕು ಅವನತಿಯತ್ತ ಸಾಗುತ್ತಿದೆ. ರೈತರು ಬೆಳೆದ ಬೆಳೆಗೆ ಸರ್ಕಾರ ಬೆಂಬಲ ಬೆಲೆ ನೀಡಬೇಕು ಎಂದು ಒತ್ತಾಯಿಸಿದರು.
ಕೃಷಿಕರು ಕಷ್ಟಪಟ್ಟು ಬೆಳೆದ ಬೆಳೆಗಳು ಅತಿವೃಷ್ಟಿ-ಅನಾವೃಷ್ಟಿಗೆ ಬಲಿಯಾಗುತ್ತಿದೆ.
(ಮೊದಲ ಪುಟದಿಂದ) ಹವಾಮಾನ ವೈಪರೀತ್ಯಕ್ಕೆ ರೈತರ ಬದುಕು ಮೂರಾಬಟ್ಟೆಯಾಗುತ್ತಿದೆ. ವನ್ಯಪ್ರಾಣಿಗಳ ಹಾವಳಿ ಹೆಚ್ಚಿದೆ. ಅಧಿಕ ಇಳುವರಿಯ ಹಿಂದೆ ಬಿದ್ದು, ಸತ್ವ ರಹಿತ ಕೃಷಿ ಕೈಗೊಳ್ಳುವಂತಾಗಿದೆ. ತಾಲೂಕಿನ ಕೊಡ್ಲಿಪೇಟೆ ಹಾಗೂ ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಕಾಡಾನೆ-ಮಾನವ ಸಂಘರ್ಷಕ್ಕೆ ಇತಿಶ್ರೀ ಹಾಡಬೇಕಿದೆ ಎಂದರು.
ಶನಿವಾರಸAತೆ ವಾಣಿಜ್ಯ ಕೇಂದ್ರವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಪ್ರವೇಶದ್ವಾರದ ಬಳಿ ದುರ್ವಾಸನೆಯ ತ್ಯಾಜ್ಯರಾಶಿ ನಿರ್ಮಾಣವಾಗುತ್ತಿದೆ. ಈ ಬಗ್ಗೆ ಅನೇಕ ಬಾರಿ ಆಡಳಿತ ವರ್ಗದ ಗಮನ ಸೆಳೆದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಆಡಳಿತ ವರ್ಗದ ಬಗ್ಗೆ ಸಾತ್ವಿಕ ಕೋಪ ಹೊರ ಹಾಕಿದರು.
ಪಕ್ಕದಲ್ಲೇ ಆರೋಗ್ಯ ಕೇಂದ್ರವಿದೆ. ಇದರ ದಾರಿಯಲ್ಲೇ ಅನಾರೋಗ್ಯದ ತಾಣವಿದೆ ಎಂದು ವ್ಯಂಗ್ಯವಾಡಿದ ನಯನತಾರಾ ಅವರು, ಇಲ್ಲಿನ ತ್ಯಾಜ್ಯ ಹೊಳೆಗೆ ಸೇರಿ ನೀರು ಕಲುಷಿತಗೊಳ್ಳುತ್ತಿದೆ. ಇಷ್ಟಾದರೂ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ನೆನೆಗುದಿಗೆ ಬಿದ್ದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೇಶದ ಪ್ರಥಮ ದಂಡನಾಯಕರಾದ ಫೀಲ್ಡ್ ಮಾರ್ಷಲ್ ಜನರಲ್ ಕಾರ್ಯಪ್ಪ ಅವರ ಹುಟ್ಟೂರು ಶನಿವಾರಸಂತೆಯಾಗಿದ್ದು, ಇಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪರ ಪ್ರತಿಮೆ ನಿರ್ಮಾಣ ಕನಸಾಗಿಯೇ ಉಳಿದಿದೆ ಎಂದ ಸಮ್ಮೇಳನಾಧ್ಯಕ್ಷರು, ತಾಲೂಕಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗಬೇಕು. ನೆಲಜಲ ರಕ್ಷಣೆಯಾಗಬೇಕೆಂದರು.
ಸಮ್ಮೇಳನಗಳು ಏಕತೆಯ ಸಂಕೇತ. ಕನ್ನಡಾಭಿಮಾನಿಗಳನ್ನು, ಸಾಹಿತ್ಯಾಸಕ್ತರನ್ನು, ಕಲಾವಿದರನ್ನು ಒಂದುಗೂಡಿಸಿ, ಪ್ರೇರಣೆ ಹಾಗೂ ಜಾಗೃತಿ ಮೂಡಿಸಿ, ಕನ್ನಡ ಸಂಸ್ಖೃತಿಯನ್ನು ಬೆಳಗಿಸುತ್ತದೆ ಎಂದ ಅವರು, ಸರ್ಕಾರಿ ಕನ್ನಡ ಶಾಲೆಗಳನ್ನು ಅಭಿವೃದ್ಧಿಪಡಿಸುವ ಮೂಲಕವೂ ಭಾಷೆಯನ್ನು ಅರಳಿಸಬಹುದು; ಆದರೆ ಸರ್ಕಾರಿ ಶಾಲೆಗಳಲ್ಲೂ ಆಂಗ್ಲಮಾಧ್ಯಮ ಪ್ರಾರಂಭಿಸಿದ್ದರಿAದ ಕನ್ನಡ ಭಾಷೆಯ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ. ಇಂಗ್ಲೀಷ್ ಭಾಷೆ ಇರಲಿ ಆದರೆ ಕನ್ನಡಕ್ಕೆ ಪ್ರಥಮ ಆದ್ಯತೆ ನೀಡಬೇಕು ಎಂದು ಆಶಿಸಿದರು.
ಜಿಲ್ಲೆಯಲ್ಲಿ ಎಲೆಮರೆ ಕಾಯಿಯಂತಿರುವ ಗ್ರಾಮೀಣ ಭಾಗದ ಮಹಿಳಾ ಬರಹಗಾರರನ್ನು ಗುರುತಿಸಿ ಮಾರ್ಗದರ್ಶನ ನೀಡಬೇಕು. ಮಹಿಳಾ ಶೋಷಣೆ, ದೌರ್ಜನ್ಯಗಳಿಗೆ ಇತಿಶ್ರೀ ಹಾಡಬೇಕು. ಸಂಘಟಿತ ಮಹಿಳೆಯರು ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು ಎಂದರು.