*ಗೋಣಿಕೊಪ್ಪ, ಫೆ. ೧೦: ಸದಾ ಮತ್ತೊಬ್ಬರ ಶ್ರೇಯಸ್ಸಿಗಾಗಿ ಪ್ರಾರ್ಥಿಸಿ, ಆಶೀರ್ವಚನ ನೀಡುವ ಬ್ರಾಹ್ಮಣರು ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸ್ವಾವಲಂಬಿ ಮತ್ತು ಸ್ವಾಭಿಮಾನಿ ಬದುಕು ನಡೆಸಲು ಬೇಕಾದ ಹಲವಾರು ಯೋಜನೆಯನ್ನು ಸರ್ಕಾರ ರೂಪಿಸಿದೆ. ಅದರ ಪ್ರಯೋಜನವನ್ನು ಪಡೆಯಲು ಸಮುದಾಯದವರು ಆಸಕ್ತರಾಗ ಬೇಕೆಂದು ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ಗೋಣಿಕೊಪ್ಪ ಕೈಕೇರಿ ಬ್ರಾಹ್ಮಣದ ಸಮುದಾಯ ಭವನದಲ್ಲಿ ಕೊಡಗು ಜಿಲ್ಲಾ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಸಮುದಾಯದವರು ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿ ಕೊಳ್ಳುವ ನಿಟ್ಟಿನಲ್ಲಿ ಮೀಸಲಾತಿಯ ಗರಿಷ್ಠತೆಯನ್ನು ಹೆಚ್ಚಿಸಲು ಸರಕಾರದ ಗಮನ ಸೆಳೆಯುವ ಪ್ರಯತ್ನ ನಡೆಸಲಾಗುವುದು. ಬ್ರಾಹ್ಮಣ ಸಮುದಾಯದ ಬೇಡಿಕೆಗೆ ಅನುಗುಣವಾಗಿ ಸ್ಪಂದಿಸುವ ಮನೋಭಾವವನ್ನು ವ್ಯಕ್ತಪಡಿಸುವ ಭರವಸೆಯನ್ನು ನೀಡಿದ ಶಾಸಕರು ಕಳೆದ ಅವಧಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಒದಗಿಸಿ ಕೊಡಲಾಗಿದೆ. ಕಲ್ಯಾಣ ಮಂಟಪ ನಿರ್ಮಾಣಕ್ಕೆ ಅನುದಾನ ನೀಡುವುದಾಗಿ ಭರವಸೆ ನೀಡಿದರು.

ಕೌಟುಂಬಿಕ ನಿರ್ವಹಣೆಯ ಆರ್ಥಿಕ ಸುಧಾರಣೆಗೆ ಹೊಟೇಲ್ ಉದ್ಯಮ ಕ್ಷೇತ್ರವನ್ನು ಅನುಸರಿಸುವುದು ಉತ್ತಮ ಮಾರ್ಗವಾಗಿದೆ. ಇದಕ್ಕೆ ಸರಕಾರವು ಅನುದಾನವನ್ನು ಒದಗಿಸಲಿದೆ. ಸ್ಥಳೀಯ ಬ್ರಾಹ್ಮಣರು ಈ ನೆಲದಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕೆಂದು ಕರೆ ನೀಡಿದರು.

ಕೊಡಗು ಜಿಲ್ಲಾ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದ ನಿಕಟಪೂರ್ವ ಅಧ್ಯಕ್ಷ ಪ್ರಭಾಕರ್ ನೆಲ್ಲಿತಾಯ ಮಾತನಾಡಿದರು.

ಕೊಡಗು ಜಿಲ್ಲಾ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಘವೇಂದ್ರ ವೈಲಾಯ, ಗೌರವಾಧ್ಯಕ್ಷ ಶ್ರೀಪತಿ ಪಡಂತಾಯ, ಕಾರ್ಯದರ್ಶಿ ಶಿವಪ್ರಸಾದ್, ಕೋಶಾಧಿಕಾರಿ ಪವನ್ ಪಡಂತಾಯ, ಗೋಣಿಕೊಪ್ಪ ಗ್ರಾ.ಪಂ. ಸದಸ್ಯ ರಾಮಕೃಷ್ಣ ಸೇರಿದಂತೆ ಸಂಘದ ಸದಸ್ಯರು ಬ್ರಾಹ್ಮಣ ಸಮುದಾಯದವರು ಹಾಜರಿದ್ದರು.