(ಕೆ.ಎಂ ಇಸ್ಮಾಯಿಲ್ ಕಂಡಕರೆ)

ಮಡಿಕೇರಿ, ಫೆ. ೧೦: ಬುಧವಾರ ಮಂಡನೆಯಾದ ಕೇಂದ್ರ ಬಜೆಟ್‌ನಲ್ಲಿ ದೇಶದಾದ್ಯಂತ ೧೫೭ ನೂತನ ನರ್ಸಿಂಗ್ ಕಾಲೇಜು ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಲಾಗಿದೆ.

೨೦೧೪ರ ನಂತರ ರಾಜ್ಯದ ೯ ಜಿಲ್ಲೆಗಳಲ್ಲಿ ಸ್ಥಾಪನೆಯಾಗಿರುವ ಮೆಡಿಕಲ್ ಕಾಲೇಜಿನಲ್ಲಿ ಪ್ರತ್ಯೇಕ ನರ್ಸಿಂಗ್ ಕಾಲೇಜು ಸ್ಥಾಪನೆಯಾಗಲಿದೆ. ಈ ಪಟ್ಟಿಯಲ್ಲಿ ಕೊಡಗು ಜಿಲ್ಲೆ ಕೂಡ ಸೇರ್ಪಡೆಗೊಂಡಿದ್ದು, ಕೇಂದ್ರ ಬಜೆಟ್‌ನಲ್ಲಿ ಕೊಡಗಿಗೆ ಪ್ರತ್ಯೇಕ ನರ್ಸಿಂಗ್ ಕಾಲೇಜು ಭಾಗ್ಯ ದೊರೆತಿದೆ.

ಕೊಡಗು ಜಿಲ್ಲೆಯ ಮೆಡಿಕಲ್ ಕಾಲೇಜಿನಲ್ಲಿ ಈಗಾಗಲೇ ನರ್ಸಿಂಗ್ ಕೋರ್ಸ್ ನಡೆಯುತ್ತಿದೆ. ೨೦೦ಕ್ಕೂ ಹೆಚ್ಚು ನರ್ಸಿಂಗ್ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಎರಡು ಬ್ಯಾಚ್ ಆರಂಭವಾಗಿದೆಯಾದರೂ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯವಿಲ್ಲ. ಜಿಲ್ಲೆಯಲ್ಲಿ ಪ್ರತ್ಯೇಕ ನರ್ಸಿಂಗ್ ಕಾಲೇಜು ಸ್ಥಾಪನೆಯಾಗುವುದರಿಂದ ಎಲ್ಲಾ ಸೌಲಭ್ಯಗಳು ಒಂದೇ ಸೂರಿನಡಿ ದೊರೆಯುತ್ತದೆ.

ಹೊರ ಜಿಲ್ಲೆಯಲ್ಲಿ ನರ್ಸಿಂಗ್ ಶಿಕ್ಷಣ

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನರ್ಸಿಂಗ್ ಕೋರ್ಸ್ ಇದ್ದರೂ ಕೂಡ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ಸೌಲಭ್ಯಗಳು ಕಡಿಮೆ ಇದೆ. ಮುಖ್ಯವಾಗಿ ವಸತಿ ಸೌಲಭ್ಯ ಬೇಕಾಗಿದೆ. ಆದರೆ ಮೆಡಿಕಲ್ ಕಾಲೇಜಿನಲ್ಲಿ ನರ್ಸಿಂಗ್ ಕೋರ್ಸ್ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯವಿಲ್ಲ.

ಜಿಲ್ಲೆಯ ಬಹುತೇಕ ವಿದ್ಯಾರ್ಥಿಗಳು ಮಂಗಳೂರು ಹಾಗೂ ಮೈಸೂರು ಜಿಲ್ಲೆಯಲ್ಲಿ ನರ್ಸಿಂಗ್ ಕೋರ್ಸ್ ಮಾಡುತ್ತಿದ್ದಾರೆ. ಕೊಡಗಿನಲ್ಲಿ ಪ್ರತ್ಯೇಕ ನರ್ಸಿಂಗ್ ಕಾಲೇಜು ಸ್ಥಾಪನೆಯಾಗುವುದರಿಂದ ಜಿಲ್ಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ.

೨೦೧೪ರಲ್ಲಿ ಆರಂಭಗೊAಡ ಮೆಡಿಕಲ್ ಕಾಲೇಜಿನಲ್ಲಿ ಹೊರ ರಾಜ್ಯ ಹಾಗೂ ಜಿಲ್ಲೆಯ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಕೊಡಗಿನ ಬೆರಳೆಣಿಕೆಯಷ್ಟು ಮಂದಿ ಮಾತ್ರ ಕೊಡಗಿನ ಮೆಡಿಕಲ್ ಕಾಲೇಜಿನ ಲಾಭ ಪಡೆದಿದ್ದು, ಸ್ವಂತ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಇದ್ದರೂ ಕೂಡ ಕೊಡಗಿನ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣವನ್ನು ಬೇರೆ ಜಿಲ್ಲೆ ಹಾಗೂ ರಾಜ್ಯಗಳಲ್ಲಿ ಪಡೆಯುತ್ತಿದ್ದಾರೆ.

ಜಿಲ್ಲೆಯಲ್ಲಿ ನರ್ಸಿಂಗ್ ಕಾಲೇಜು ಸ್ಥಾಪನೆಯಾಗುವಾಗ ಕೊಡಗಿನ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಬೇಕೆಂಬ ಒತ್ತಾಯವೂ ಕೇಳಿಬರುತ್ತಿದೆ.

ಜಾಗದ ಸಮಸ್ಯೆ!

ನರ್ಸಿಂಗ್ ಕಾಲೇಜು ಜಿಲ್ಲೆಯ ಜಿಲ್ಲಾ ಕೇಂದ್ರದಲ್ಲಿ ಇದ್ದರೆ ಮಾತ್ರ ಎಲ್ಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ಎಲ್ಲಾ ರೀತಿಯಲ್ಲೂ ಹೆಚ್ಚು ಅನುಕೂಲವಾಗುತ್ತದೆ.

ಮಡಿಕೇರಿಯಲ್ಲಿ ನರ್ಸಿಂಗ್ ಕಾಲೇಜು ಸ್ಥಾಪನೆಗೆ ಜಾಗದ ಸಮಸ್ಯೆ ತಲೆ ನೋವಾಗಿ ಪರಿಣಮಿಸುವ ಸಾಧ್ಯತೆ ಇದ್ದು, ಜಿಲ್ಲಾಡಳಿತ ನರ್ಸಿಂಗ್ ಕಾಲೇಜು ಸ್ಥಾಪನೆಗೆ ಮಡಿಕೇರಿ ನಗರದಲ್ಲಿ ಸೂಕ್ತ ಜಾಗದ ವ್ಯವಸ್ಥೆ ಮಾಡಬೇಕಾಗಿದೆ. ಜಿಲ್ಲೆಯಲ್ಲಿ ಪ್ರತ್ಯೇಕ ನರ್ಸಿಂಗ್ ಕಾಲೇಜು ಆರಂಭಗೊಳ್ಳುವುದರಿAದ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ.

ಕೇಂದ್ರ ಬಜೆಟ್‌ನಲ್ಲಿ ದೇಶದಲ್ಲಿ ೧೫೬ ನರ್ಸಿಂಗ್ ಕಾಲೇಜು ಸ್ಥಾಪನೆ ಮಾಡುವುದಾಗಿ ಘೋಷಿಸಿದ್ದು, ಇದರ ಪೈಕಿ ರಾಜ್ಯಕ್ಕೆ ೯ ನರ್ಸಿಂಗ್ ಕಾಲೇಜು ದೊರೆಯಲಿವೆ.

೨೦೧೪ರ ನಂತರ ರಾಜ್ಯದಲ್ಲಿ ಕೊಡಗು, ಚಾಮರಾಜನಗರ, ಚಿಕ್ಕಮಗಳೂರು, ಬೆಂಗಳೂರು, ಕಲಬುರಗಿ, ಕಾರವಾರ, ಕೊಪ್ಪಳ, ಗದಗ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗಿದ್ದು, ಈ ಜಿಲ್ಲೆಗಳಿಗೆ ಪ್ರತ್ಯೇಕ ನರ್ಸಿಂಗ್ ಕಾಲೇಜು ಬಜೆಟ್‌ನಲ್ಲಿ ಘೋಷಣೆಯಾಗಿದೆ.