ಮಡಿಕೇರಿ, ಫೆ. ೯: ಹದಗೆಟ್ಟ ರಸ್ತೆ ಹಾಗೂ ಅವೈಜ್ಞಾನಿಕವಾಗಿ ಕೇಬಲ್ ಅಳವಡಿಸಲು ಗುಂಡಿ ತೆಗೆದ ಪರಿಣಾಮ ಅವಘಡಗಳು ಸಂಭವಿಸುತ್ತಿದ್ದು, ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸೂಕ್ತ ಕ್ರಮವಹಿಸುವಂತೆ ಜನಪರ ಹೋರಾಟ ಸಮಿತಿ ಆಗ್ರಹಿಸಿದೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ, ಪ್ರಕೃತಿ ವಿಕೋಪದ ಬಳಿಕ ಚೆಟ್ಟಳ್ಳಿಯ ರಸ್ತೆ ತೀರ ಹದಗೆಟ್ಟಿದೆ. ಬರೆ ಕುಸಿದ ಪರಿಣಾಮ ರಸ್ತೆ ಸಂಪೂರ್ಣ ಹಾಳಾಗಿದ್ದು, ರಸ್ತೆ ಅಭಿವೃದ್ಧಿಗೆ ಅನುದಾನವೂ ಬಿಡುಗಡೆಯಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಆದರೆ, ಕಾಮಗಾರಿ ಕೈಗೆತ್ತಿಕೊಳ್ಳಲು ತಡ ಮಾಡುತ್ತಿರಲು ಕಾರಣ ಏನು? ಎಂದು ಪ್ರಶ್ನಿಸಿದ ಅವರು, ಹದಗೆಟ್ಟ ರಸ್ತೆಯ ಬದಿಯಲ್ಲಿ ಕೇಬಲ್ ಅಳವಡಿಕೆ ಕಾರ್ಯ ಮಂದಗತಿಯಲ್ಲಿ ಸಾಗುತ್ತಿದೆ. ತೆಗೆದಿರುವ ಗುಂಡಿಯನ್ನು ಮುಚ್ಚಿಲ್ಲ. ಇದರಿಂದ ಸಂಚಾರಕ್ಕೆ ಸಮಸ್ಯೆಯಾಗಿದೆ. ವಾಹನಗಳು ಮುಖಾಮುಖಿಯಾದರೆ ರಸ್ತೆ ದಾಟುವುದು ದುಸ್ತರವಾಗಿದೆ. ಇದರಿಂದ ತಾ. ೮ ರಂದು ಅಮಾಯಕ ಕಾರ್ಮಿಕನ ಜೀವ ಬಲಿಯಾಗಿದೆ ಇದಕ್ಕೆ ಯಾರು ಹೊಣೆ ಎಂದು ಕಿಡಿಕಾರಿದರು.
ಗುಂಡಿ ಮುಚ್ಚದ ಕಾರಣ ಈ ಅವಘಡಗಳು ಸಂಭವಿಸಿ ಸಾವು ಸಂಭವಿಸಿದೆ. ನೊಂದ ಕುಟುಂಬಕ್ಕೆ ಸಂಸ್ಥೆಯೇ ವೈಯಕ್ತಿಕ ಪರಿಹಾರವನ್ನು ನೀಡಬೇಕೆಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ಸಮಿತಿ ಸದಸ್ಯ ಧನಂಜಯ ಹಾಜರಿದ್ದರು.