ಶ್) ಗೋಣಿಕೊಪ್ಪಲು, ಫೆ.೯: ಅರಣ್ಯ ಇಲಾಖೆಯು ರೈತರ ಕಾಫಿ ತೋಟದ ಬದಿಯಲ್ಲಿ ಕಾಂಕ್ರಿಟ್ ಕಲ್ಲುಗಳನ್ನು ಅಳವಡಿಸುವ ಮೂಲಕ ತನ್ನ ಸರಹದ್ದುಗಳನ್ನು ಗುರುತು ಮಾಡುವ ಕೆಲಸ ಶರವೇಗದಿಂದ ನಡೆಯುತ್ತಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಬಹುತೇಕ ರೈತರು ಕಂಗಾಲಾಗಿದ್ದು ಅರಣ್ಯ ಇಲಾಖೆಯು ಏಕಾಎಕಿ ಕೈಗೊಂಡ ನಿರ್ಧಾರದ ಬಗ್ಗೆ ತಮ್ಮ ಅಸಮಾಧಾನವನ್ನು ಹೊರ ಹಾಕುವುದರೊಂದಿಗೆ ಇಲಾಖೆಯ ಕಾರ್ಯವೈಖರಿಯನ್ನು ಖಂಡಿಸಿ ಪ್ರತಿಭಟನೆ ನಡೆಸುವ ನಿರ್ಧಾರಕ್ಕೆ ಬಂದಿದ್ದಾರೆ.ಅರಣ್ಯ ಇಲಾಖೆ ವತಿಯಿಂದ ರೈತರಿಗೆ ಯಾವುದೇ ಮಾಹಿತಿ ಇಲ್ಲದೆ ಕಾಫಿ ತೋಟದ ಬದಿಯಲ್ಲಿ ಹಾಗೂ ಕಾಫಿ ತೋಟದ ಒಳಭಾಗದಲ್ಲಿ ಕಾಂಕ್ರಿಟ್ ಮಾದರಿಯ ಕಲ್ಲುಗಳನ್ನು ನೆಡುವ ಮೂಲಕ ಅರಣ್ಯ ಇಲಾಖೆಯು ತನ್ನ ಗಡಿಯನ್ನು ಗುರುತಿಸುವ ಕೆಲಸವನ್ನು ಕೈಗೆತ್ತಿಕೊಂಡಿವೆ. ದ.ಕೊಡಗಿನ ಕಾನೂರು - ಲಕ್ಕುಂದ - ಕೆ.ಬಾಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲೋಕೋಪಯೋಗಿ ಇಲಾಖೆಯ ಮುಖ್ಯ ರಸ್ತೆ ಬದಿಯಲ್ಲಿ ಯಾರ ಗಣನೆಗೂ ಬಾರದ ರೀತಿಯಲ್ಲಿ ಅರಣ್ಯ ವ್ಯಾಪ್ತಿಯನ್ನು ಗುರುತು ಮಾಡುವ ಕೆಲಸ ಕೈಗೆತ್ತಿಕೊಂಡಿದೆ. ಅಲ್ಲದೆ ಈ ಭಾಗದ ಬಹುತೇಕ ರೈತರ ಕಾಫಿ ತೋಟಕ್ಕೆ ಒತ್ತಿಕೊಂಡAತೆ ಕಾಂಕ್ರಿಟ್ ಮಾದರಿಯ ಗಡಿ ಗುರುತುಗಳನ್ನು ಮಾಡಲಾಗುತ್ತಿದೆ. ಕಾಂಕ್ರಿಟ್ ಬಳಸಿ ರಸ್ತೆಯ ಎರಡು ಬದಿಯಲ್ಲಿಯೂ ೫೦ ಮೀಟರ್‌ಗೆ ಒಂದರAತೆ ಇಂತಹ ಕಲ್ಲುಗಳನ್ನು ಅಳವಡಿಸಲಾಗುತ್ತಿದೆ.
ಯಾರ ಗಮನಕ್ಕೂ ಬಾರದ ರೀತಿಯಲ್ಲಿ ಅರಣ್ಯ ಇಲಾಖೆಯು ಕೈಗೊಂಡ ಕ್ರಮದ ಬಗ್ಗೆ ಈ ಭಾಗದ ಬಹುತೇಕ ರೈತರು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ರೈತರ ಕಾಫಿ ತೋಟದ ಮಾಲೀಕರ ಗಮನಕ್ಕೆ ಬಾರದ ರೀತಿಯಲ್ಲಿ ಬೇಲಿಯ ಬದಿಯಲ್ಲಿ ಹಾಗೂ ತೋಟದ ಒಳಭಾಗದಲ್ಲಿ ಗಡಿ ಗುರುತುಗಳನ್ನು ಮಾಡಿರುವ ಕ್ರಮವನ್ನು ಖಂಡಿಸಿದ್ದಾರೆ.
ಕೆ.ಬಾಡಗ ಗ್ರಾ. ಪಂ.ಯ ಉಪಾಧ್ಯಕ್ಷರು, ಸದಸ್ಯರು ಸಮೀಪದ ನಾಲ್ಕೇರಿ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರು
(ಮೊದಲ ಪುಟದಿಂದ) ಹಾಗೂ ನಾಗರಿಕರು ಸ್ಥಳಕ್ಕೆ ತೆರಳಿ ಅರಣ್ಯ ಇಲಾಖೆಯು ರಸ್ತೆ ಬದಿಯಲ್ಲಿ ಹಾಗೂ ತೋಟದ ಬದಿಯಲ್ಲಿ ಅಳವಡಿಸಿರುವ ಗಡಿ ಗುರುತು ಕಲ್ಲುಗಳ ಬಗ್ಗೆ ಅರಣ್ಯ ಇಲಾಖೆಯ ಕೆಲವು ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಈ ಬಗ್ಗೆ ಯಾವುದೇ ಸ್ಪಷ್ಪ ಮಾಹಿತಿ ಲಭ್ಯವಾಗಲಿಲ್ಲ. ಇದರಿಂದ ಅಸಮಾಧಾನಗೊಂಡ ಈ ಭಾಗದ ನಾಗರಿಕರು ಪಂಚಾಯಿತಿ ಸದಸ್ಯರು ಇಲಾಖೆಯ ಕಾರ್ಯವೈಖರಿಯ ಬಗ್ಗೆ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.
ಸ್ಥಳದಲ್ಲಿದ್ದ ಕೆ.ಬಾಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಕ್ಕಾಟಿರ ರಿತೇಶ್ ಬಿದ್ದಪ್ಪ ಮಾತನಾಡಿ, ಮುಖ್ಯ ರಸ್ತೆಯ ಬಳಿಯಲ್ಲಿ ಯಾರ ಗಮನಕ್ಕೆ ಬಾರದ ರೀತಿಯಲ್ಲಿ ಅರಣ್ಯ ಇಲಾಖೆಯು ತನ್ನ ಸರಹದ್ದನ್ನು ಗುರುತು ಮಾಡುತ್ತಿದೆ. ಅಲ್ಲದೆ ರೈತರ ತೋಟದ ಮಧ್ಯೆ ಹಾಗೂ ರಸ್ತೆ ಬದಿಯಲ್ಲಿರುವ ಬೇಲಿಯಲ್ಲಿಯೂ ಗುರುತು ಕಲ್ಲುಗಳನ್ನು ಕಾಂಕ್ರಿಟ್ ಮಾಡಿ ನಿಲ್ಲಿಸಲಾಗಿದೆ. ಇದನ್ನು ತಕ್ಷಣ ನಿಲ್ಲಿಸಬೇಕು. ಹಾಕಿರುವ ಕಲ್ಲುಗಳನ್ನು ತೆರವುಗೊಳಿಸಬೇಕು. ಅಲ್ಲದೆ ಯಾವ ಮಾನದಂಡದಲ್ಲಿ ಅರಣ್ಯ ವ್ಯಾಪ್ತಿಯನ್ನು ಗುರುತಿಸಲಾಗಿದೆ ಎಂಬುದನ್ನು ಇಲಾಖೆಯ ಅಧಿಕಾರಿಗಳು ಸಾರ್ವಜನಿಕವಾಗಿ ತಿಳಿಸಬೇಕೆಂದು ಆಗ್ರಹಿಸಿದರು.
ನಾಲ್ಕೇರಿ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾಗಿರುವ ಚಿರಿಯಪಂಡ ಸಚಿನ್ ಪೆಮ್ಮಯ್ಯ ಪ್ರತಿಕ್ರಿಯಿಸಿ ಗುರುವಾರ ಮುಂಜಾನೆಯಿAದ ರಸ್ತೆ ಬದಿಯಲ್ಲಿ ಹಾಗೂ ರೈತರ ಕಾಫಿ ತೋಟದಲ್ಲಿ ಅರಣ್ಯ ಇಲಾಖೆಯು ಅಕ್ರಮವಾಗಿ ಗಡಿ ಗುರುತು ಕಲ್ಲುಗಳನ್ನು ಅಳವಡಿಸುತ್ತಿರುವ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಕ್ಷೇತ್ರದ ಶಾಸಕರಾದ ಕೆ.ಜಿ.ಬೋಪಯ್ಯ ಅವರಿಗೆ ದೂರವಾಣಿ ಮೂಲಕ ಘಟನೆಯ ಬಗ್ಗೆ ವಿವರ ನೀಡಿದ್ದೇನೆ. ಪರಿಶೀಲಿಸುವುದಾಗಿ ಶಾಸಕರು ಭರವಸೆ ನೀಡಿದ್ದಾರೆ. ಅರಣ್ಯ ಇಲಾಖೆಯು ತಕ್ಷಣ ಕೈಗೊಂಡ ಕಾಮಗಾರಿಯನ್ನು ತೆರವುಗೊಳಿಸ ಬೇಕೆಂದರು.
ನಾಲ್ಕೇರಿ ಗ್ರಾಮದ ಹಿರಿಯರಾದ ಚೆಪ್ಪುಡಿರ ಜನಕ್ ಪೆಮ್ಮಯ್ಯ ಮಾತನಾಡಿ ಕಳೆದ ೪೭ ವರ್ಷಗಳಿಂದ ವಾಸವಾಗಿದ್ದೇನೆ. ನನಗೆ ತಿಳಿದಂತೆ ಅರಣ್ಯ ಇಲಾಖೆಯ ಹದ್ದುಬಸ್ತು ಕಲ್ಲುಗಳು ನಾಲ್ಕೇರಿ ಕೆ.ಬಾಡಗ ಮುಖ್ಯ ರಸ್ತೆಯ ಎಡ ಭಾಗದಲ್ಲಿತ್ತು.ಇದೀಗ ಯಾರ ಗಮನಕ್ಕೂ ಬಾರದೆ ಮುಖ್ಯ ರಸ್ತೆಯ ಬಲ ಭಾಗದಲ್ಲಿರುವ ನನ್ನ ಕಾಫಿ ತೋಟದ ಬೇಲಿಯ ಬದಿಯಲ್ಲಿ ಅರಣ್ಯ ಇಲಾಖೆಯು ಸರಹದ್ದು ಕಲ್ಲುಗಳನ್ನು ಅಳವಡಿಸಿದೆ. ಇದು ಸರಿಯಾದ ಕ್ರಮವಲ್ಲ. ಕೂಡಲೇ ಕಲ್ಲುಗಳನ್ನು ತೆರವುಗೊಳಿಸಬೇಕೆಂದರು. ಗಡಿ ಗುರುತು ಕಲ್ಲುಗಳನ್ನು ಅಳವಡಿಸಿರುವ ಸ್ಥಳವನ್ನು ಪರಿಶೀಲಿಸುವ ವೇಳೆ ಕೆ.ಬಾಡಗ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಚೆಪ್ಪುಡಿರ ರೀಟಾ, ಗ್ರಾಮಸ್ಥರಾದ ಗುಡಿಯಂಗಡ ರಾಜ,ಚೆಪ್ಪುಡಿರ ವಿಜಯ್,ಪೂಣಚ್ಚ,ನಜೀರ್,ಗೀತಾ,ವಾಣಿ, ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.