ಸೋಮವಾರಪೇಟೆ, ಫೆ. ೯: ವಿದ್ಯಾರ್ಥಿಗಳಲ್ಲಿ ಕಲಿಕೆಯ ಬಗ್ಗೆ ಆಸಕ್ತಿ ಮೂಡಿಸುವ ಕೆಲಸ ಉಪನ್ಯಾಸಕ ವರ್ಗದಿಂದ ಆಗಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ಕುಲಸಚಿವ ಡಾ. ಬಿ.ಎಲ್. ಧರ್ಮ ಅವರು ಅಭಿಪ್ರಾಯಿಸಿದರು. ಇಲ್ಲಿನ ಬಿಟಿಸಿಜಿ ಸರ್ಕಾರಿ ಪದವಿಪೂರ್ವ ಕಾಲೇಜಿ ನಲ್ಲಿ ಆಯೋಜಿಸಿದ್ದ ಪ್ರಾಂಶುಪಾಲ ಹೆಚ್.ಎನ್. ರಾಜು ಅವರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ಎಲ್ಲರೂ ತಮ್ಮ ಕರ್ತವ್ಯಕ್ಕೆ ಗೌರವ ನೀಡಬೇಕು. ತಾವು ಮಾಡುವ ಕಾರ್ಯಗಳು ಭಗವಂತನಿಗೆ ಮೆಚ್ಚುಗೆಯಾಗಬೇಕು. ವಿದ್ಯಾರ್ಥಿಗಳಲ್ಲಿ ಕಲಿಕೆಯ ಬಗ್ಗೆ ಆಸಕ್ತಿಯೊಂದಿಗೆ ಉತ್ಸಾಹ ಮೂಡಿಸಬೇಕು ಎಂದ ಅವರು, ವಿಶ್ವ ವಿದ್ಯಾಲಯದ ಯುಜಿಡಿ ಅನುದಾನವನ್ನು ಬಳಸಿಕೊಂಡು ಕಾಲೇಜು ಹಾಗೂ ವಿದ್ಯಾರ್ಥಿಗಳ ಅಭಿವೃದ್ಧಿಗೆ ಶ್ರಮಿಸಬೇಕೆಂದು ಕಿವಿಮಾತು ಹೇಳಿದರು. ಕಳೆದ ೩೪ ವರ್ಷಗಳ ಕಾಲ ಬಿಟಿಸಿಜಿ ಕಾಲೇಜಿ ನಲ್ಲಿ ಉಪನ್ಯಾಸಕ ರಾಗಿ, ಪ್ರಾಂಶು ಪಾಲರಾಗಿ ಕರ್ತವ್ಯ ನಿರ್ವಹಿಸಿ ವಯೋನಿವೃತ್ತಿ ಹೊಂದಿದ ಪ್ರಾಂಶುಪಾಲ ಹೆಚ್.ಎನ್. ರಾಜು ಅವರ ಸೇವೆಯನ್ನು ಇದೇ ಸಂದರ್ಭ ಧರ್ಮ ಅವರು ಸ್ಮರಿಸಿದರು. ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗಿಯಾಗಿ ಪ್ರಾಂಶುಪಾಲರನ್ನು ಸನ್ಮಾನಿಸಿ ಮಾತನಾಡಿದ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಯಾವುದೇ ಒಂದು ವಿದ್ಯಾಸಂಸ್ಥೆ ಗಟ್ಟಿಯಾಗಿ ನಿಲ್ಲಬೇಕಾದರೆ ಉಪನ್ಯಾಸಕ ವರ್ಗ, ಆಡಳಿತ ಮಂಡಳಿ, ವಿದ್ಯಾರ್ಥಿಗಳು ಹಾಗೂ ಪೋಷಕರ ಪಾತ್ರ ಅತೀ ಮುಖ್ಯ. ಉಪನ್ಯಾಸಕರು ವಿದ್ಯಾರ್ಥಿ ಗಳಲ್ಲಿ ಮೌಲ್ಯಗಳನ್ನು ಬಿತ್ತುವ ಕೆಲಸ ಮಾಡಬೇಕು. ಜೀವನ ಮೌಲ್ಯಗಳನ್ನು ಅರಿಯದೇ ಹೊಂದುವ ಶಿಕ್ಷಣ ವ್ಯರ್ಥವಾಗಲಿದೆ ಎಂದು ಕಿವಿಮಾತು ನುಡಿದರು. ಕಳೆದ ೩೪ ವರ್ಷಗಳಿಂದ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಹೆಚ್.ಎನ್. ರಾಜು ಅವರನ್ನು ಕಾಲೇಜು ಅಭಿವೃದ್ಧಿ ಸಮಿತಿ, ಉಪನ್ಯಾಸಕ ಮತ್ತು ಸಿಬ್ಬಂದಿ ವರ್ಗದ ಪರವಾಗಿ ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಿ ಬೀಳ್ಕೊಡಲಾಯಿತು.
ಈ ಸಂದರ್ಭ ಕಾಲೇಜಿನ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎಸ್. ಮಹೇಶ್, ನೂತನ ಪ್ರಬಾರ ಪ್ರಾಂಶುಪಾಲೆ ಸುನಿತಾ, ಸಮಿತಿ ಸದಸ್ಯ ಎಂ.ಪಿ. ಗೋಪಾಲ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಸ್.ಆರ್. ಸೋಮೇಶ್ ಅವರುಗಳು ಉಪಸ್ಥಿತರಿದ್ದರು.