ಮಡಿಕೇರಿ, ಫೆ. ೮: ಆ್ಯಂಬ್ಯುಲೆನ್ಸ್ ಚಕ್ರಕ್ಕೆ ಸಿಲುಕಿದ ಪರಿಣಾಮ ಬೈಕ್ ಸವಾರನ ತಲೆಗೆ ಗಂಭೀರ ಪೆಟ್ಟಾಗಿ ಮೃತಪಟ್ಟ ಘಟನೆ ಮಡಿಕೇರಿ-ಚೆಟ್ಟಳ್ಳಿ ರಸ್ತೆ ನಡುವಿನ ಕತ್ತಲೆಕಾಡುವಿನಲ್ಲಿ ಸಂಭವಿಸಿದೆ.
ಚೆಟ್ಟಳ್ಳಿ ನಿವಾಸಿ, ವೃತ್ತಿಯಲ್ಲಿ ಆಚಾರಿಯಾಗಿರುವ ಕೆ. ಲೋಕೇಶ್ (೪೪) ಮೃತ ದುರ್ದೈವಿ. ಗೋಣಿಕೊಪ್ಪದಿಂದ ಚೆಟ್ಟಳ್ಳಿ ಮಾರ್ಗವಾಗಿ ಮಡಿಕೇರಿಗೆ ಬರುತ್ತಿದ್ದ ಆ್ಯಂಬ್ಯುಲೆನ್ಸ್ ಹಾಗೂ ಮಡಿಕೇರಿಯಿಂದ ಚೆಟ್ಟಳ್ಳಿಗೆ ತೆರಳುತ್ತಿದ್ದ ಬೈಕ್ ನಡುವೆ ಅಪಘಾತವಾಗಿದ್ದು, ರಸ್ತೆ ಬದಿಯಲ್ಲಿ ತೆಗೆದಿರುವ ಗುಂಡಿ ಮುಚ್ಚದಿರುವುದು ಘಟನೆಗೆ ಕಾರಣ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ. ಘಟನೆ ವಿವರ
ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದಿAದ ಆ್ಯಂಬ್ಯುಲೆನ್ಸ್ನಲ್ಲಿ ರೋಗಿಯನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದ ವೇಳೆಯಲ್ಲಿ ಮಡಿಕೇರಿಯಿಂದ ತೆರಳುತ್ತಿದ್ದ ಚೆಟ್ಟಳ್ಳಿಯ ಕಾಫಿ
(ಮೊದಲ ಪುಟದಿಂದ) ಸಂಶೋಧನಾ ಕೇಂದ್ರದ ವಸತಿಗೃಹದಲ್ಲಿ ನೆಲೆಸಿರುವ ಲೋಕೇಶ್ ತನ್ನ ಬೈಕ್ ಅನ್ನು ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಈ ಸಂದರ್ಭ ವೇಗದಲ್ಲಿ ಬರುತ್ತಿದ್ದ ಆ್ಯಂಬ್ಯುಲೆನ್ಸ್ ಬೈಕ್ಗೆ ಡಿಕ್ಕಿಯಾಗಿದೆ. ಇದರಿಂದ ಬೈಕ್ ಸಹಿತ ಸವಾರ ರಸ್ತೆಗೆ ಬಿದ್ದಿದ್ದಾರೆ. ಇದನ್ನು ಗಮನಿಸದ ಆ್ಯಂಬ್ಯುಲೆನ್ಸ್ ಚಾಲಕ ವಾಹನ ಚಲಾಯಿಸಿದ್ದಾರೆ.
ಈ ಸಂದರ್ಭ ಲೋಕೇಶ್ನ ತಲೆ ಮೇಲೆ ವಾಹನ ಹರಿದಿದ್ದು, ಹೆಲ್ಮೆಟ್ ಪುಡಿಪುಡಿಯಾಗಿ ತಲೆಗೆ ಗಂಭೀರ ಪೆಟ್ಟಾಗಿದೆ. ತೀವ್ರ ರಕ್ತಸ್ರಾವವಾಗಿ ಅಸ್ವಸ್ಥಗೊಂಡ ಲೋಕೇಶ್ ಅವರನ್ನು ಅದೇ ಆ್ಯಂಬ್ಯುಲೆನ್ಸ್ನಲ್ಲಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ಕರೆತರುವ ಪ್ರಯತ್ನ ಮಾಡಲಾಯಿತು. ಆದರೆ, ಮಾರ್ಗಮಧ್ಯೆ ಲೋಕೇಶ್ ಮೃತಪಟ್ಟಿದ್ದಾರೆ.
ಮೃತನ ಪತ್ನಿ ಭಾರತಿ ಚೆಟ್ಟಳ್ಳಿ ಕಾಫಿ ಸಂಶೋಧನಾ ಉಪಕೇಂದ್ರದಲ್ಲಿ ಕಾರ್ಯನಿರ್ವಹಿಸಿದ್ದು, ಅಲ್ಲಿನ ವಸತಿಗೃಹದಲ್ಲಿಯೇ ವಾಸವಿದ್ದರು. ಮಡಿಕೇರಿಗೆ ಕೆಲಸಕ್ಕೆಂದು ಬಂದು ಕಾರ್ಮಿಕರನ್ನು ಬಿಟ್ಟು ಚೆಟ್ಟಳ್ಳಿಯ ತನ್ನ ಮನೆಯಲ್ಲಿ ಕೆಲಸವಿದೆ ಎಂದು ತೆರಳುತ್ತಿದ್ದ ಸಂದರ್ಭ ಈ ದುರ್ಘಟನೆ ಸಂಭವಿಸಿದೆ.
ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುಂಡಿಯೇ ಅವಘಡಕ್ಕೆ ಕಾರಣ
ರಸ್ತೆ ಬದಿಯಲ್ಲಿ ಹಲವು ದಿನಗಳಿಂದ ಕೇಬಲ್ ಅಳವಡಿಸಲೆಂದು ಗುಂಡಿ ತೆಗೆದು ಮುಚ್ಚದಿರುವುದರಿಂದ ಅವಘಡ ಸಂಭವಿಸಿದೆ ಎಂದು ದೂರಿನಲ್ಲಿ ಮೃತನ ಪತ್ನಿ ಆರೋಪಿಸಿದ್ದಾರೆ.
ಇಕ್ಕಟ್ಟಿನ ರಸ್ತೆಯಲ್ಲಿ ಸಂಚರಿಸುವುದು ಕಷ್ಟದಾಯಕವಾಗಿದೆ. ಸಮರ್ಪಕವಾಗಿ ಜಾಗವಿಲ್ಲದೆ ಈ ಘಟನೆ ಸಂಭವಿಸಿದೆ. ಗುಂಡಿ ತೆಗೆದು ಮುಚ್ಚದವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.