ಶ್ರೀಮಂಗಲ, ಫೆ. ೮: ಬಿಜೆಪಿಯ ಸತತ ಸುಳ್ಳು ಮತ್ತು ಭ್ರಷ್ಟಾಚಾರದಿಂದ ಜನ ರೋಸಿ ಹೋಗಿದ್ದು ಮುಂಬರುವ ವಿಧಾನಸಭಾ ಚುನಾವಣೆ ಸಮೀಪಿಸಿದ್ದು, ಬದಲಾವಣೆಗಾಗಿ ಜನ ಬಯಸಿದ್ದು, ಕಾರ್ಯಕರ್ತರು ಈ ಅವಕಾಶವನ್ನು ಸಂಘಟಿತರಾಗಿ ಕೆಲಸ ಮಾಡಿ ಉಪಯೋಗಿಸಿಕೊಳ್ಳಬೇಕು ಎಂದು ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಕರೆ ನೀಡಿದರು.

ಮಂಗಳವಾರ ಪೊನ್ನಂಪೇಟೆ ತಾಲೂಕು ಕುಟ್ಟ ಕೊಡವ ಸಮಾಜದಲ್ಲಿ ನಡೆದ ಕುಟ್ಟ, ಕೆ.ಬಾಡಗ ಮತ್ತು ನಾಲ್ಕೇರಿ ವಲಯ ಕಾಂಗ್ರೆಸ್ ಪಕ್ಷದ ಸಮಾವೇಶದಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷ ಕಳೆದ ೨೫ ವರ್ಷಗಳಿಂದ ಕ್ಷೇತ್ರದಲ್ಲಿ ಅಧಿಕಾರದಲ್ಲಿ ಇಲ್ಲದಿದ್ದರೂ ಸಹ ಸಂಕಷ್ಟದ ಸಮಯದಲ್ಲಿ ಪಕ್ಷದೊಂದಿಗೆ ಕಾರ್ಯಕರ್ತರು, ಮತದಾರರು ಇದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಎರಡು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ದಕ್ಷಿಣ ಕೊಡಗಿನ ಕೂಟಿಯಾಲ ಸಂಪರ್ಕ ಮಾರ್ಗ ನ್ಯಾಯಾಲಯದಲ್ಲಿರುವ ಪ್ರಕರಣದ ಬಗ್ಗೆ ಅಧ್ಯಯನ ನಡೆಸಿ ಜನರ ಪ್ರಯೋಜನಕ್ಕೆ ಸಂಪರ್ಕಿಸಲು ನಾವು ಸ್ಥಳಕ್ಕೆ ಭೇಟಿ ನೀಡಿ ಕೈಗೆತ್ತಿಕೊಳ್ಳಲು ನಿರ್ಧರಿಸಿದ್ದೆವು. ಈ ಸಂದರ್ಭ ಶಾಸಕ ಕೆ.ಜಿ. ಬೋಪಯ್ಯ ಮತ್ತು ಪಶ್ಚಿಮಘಟ್ಟ ಸಂರಕ್ಷಣಾ ಸಮಿತಿ ಅಧ್ಯಕ್ಷರಾಗಿದ್ದ ರವಿ ಕುಶಾಲಪ್ಪ ಅವರು ಈ ಮಾರ್ಗ ಸಂಪರ್ಕಿಸಲು ಅನುದಾನ ಬಿಡುಗಡೆ ಮಾಡಿರುವುದಾಗಿ ಹೇಳಿಕೆ ನೀಡಿದ್ದರು. ಆದರೆ ಈ ಬಗ್ಗೆ ಸಲ್ಲಿಸಿರುವ ಪ್ರಸ್ತಾವನೆ ತಿರಸ್ಕಾರವಾಗಿದೆ. ಇದಲ್ಲದೆ ಕೆ.ಜಿ. ಬೋಪಯ್ಯ ಅವರು ಗೋಣಿಕೊಪ್ಪ ಬಸ್ ನಿಲ್ದಾಣ ನಿರ್ಮಾಣಕ್ಕೆ ಒಂದು ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಹೇಳಿದ್ದಾರೆ. ಆದರೆ ೨೦೧೮ರಲ್ಲಿ ನಮ್ಮ ಸರ್ಕಾರ ಇದ್ದಾಗ ಈ ಬಸ್ ನಿಲ್ದಾಣಕ್ಕೆ ಆರು ಕೋಟಿಯ ಡಿಪಿಆರ್ ಸಲ್ಲಿಸಲಾಗಿತ್ತು. ಹಾಗಿರುವಾಗ ಒಂದು ಕೋಟಿಯಲ್ಲಿ ಈ ಬಸ್ ನಿಲ್ದಾಣ ನಿರ್ಮಾಣ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು. ಕೊಡವ ಸಮಾಜಕ್ಕೆ ರೂ.೧೦ ಕೋಟಿ ಬಿಡುಗಡೆಯಾಗಿದೆ ಎಂದು ಶಾಸಕರು ಹೇಳಿಕೆ ನೀಡುತ್ತಿದ್ದು ಇದುವರೆಗೆ ಯಾವುದೇ ಹಣ ಬಿಡುಗಡೆಯಾಗಿಲ್ಲ ಎಂದು ಪೊನ್ನಣ್ಣ ಅವರು ಹೇಳಿದರು.

ಮಾಜಿ ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ಮಾತನಾಡಿ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲಾ ಜನಾಂಗ, ಜಾತಿ, ಧರ್ಮದವರು ಒಂದೇ ತಾಯಿಯ ಮಕ್ಕಳಂತೆ ಬದುಕಲು ಪೂರಕ ವಾತಾವರಣವನ್ನು ಒದಗಿಸುತ್ತದೆ ಎಂದರು. ಅಕ್ರಮ - ಸಕ್ರಮದಡಿ ಜಾಗ ಮಂಜೂರಾತಿ ಮಾಡುವ ಸಂದರ್ಭ ಕಾಂಗ್ರೆಸ್ ಕಾರ್ಯಕರ್ತರ ಕಡತವನ್ನು ವಿಲೇವಾರಿ ಮಾಡುತ್ತಿಲ್ಲ, ಎಲ್ಲಾ ವಿಚಾರದಲ್ಲಿ ಶಾಸಕರು ರಾಜಕೀಯ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದು ಜಿಲ್ಲೆಯ ಜನತೆಗೆ ಉತ್ತಮ ಆಡಳಿತ ನೀಡಲು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಮಾಜಿ ಸದಸ್ಯರಾದ ಅರುಣ್ ಮಾಚಯ್ಯ ಅವರು ಮಾತನಾಡಿ ಅಂತರರಾಷ್ಟಿçÃಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರಲ್‌ಗೆ ೬೦ ಡಾಲರ್‌ಗೆ ಇಳಿದಿದ್ದರೂ ಲೀಟರ್‌ಗೆ ರೂ.೧೦೦ ಪೆಟ್ರೋಲ್ ಮತ್ತು ರೂ. ೯೦ ಡೀಸೆಲ್ ದರವಿದೆ. ಅಡಿಗೆ ಅನಿಲ ದರ ಕಾಂಗ್ರೆಸ್ ಸರ್ಕಾರದಲ್ಲಿ ೪೫೦ ಇದ್ದದ್ದು ಈಗ ೧೨೦೦ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ರೈತ ಸಂಘಕ್ಕೆ ಪಕ್ಷಾತೀತವಾಗಿ ಎಲ್ಲರೂ ಬೆಂಬಲ ನೀಡುತ್ತಾ ಬಂದಿದ್ದೇವೆ, ಹೊರತು ಒಬ್ಬ ವ್ಯಕ್ತಿಗೆ ಬೆಂಬಲ ನೀಡಿಲ್ಲ ರೈತ ಸಂಘದ ಮೂಲಕ ರಾಜಕೀಯ ಪ್ರವೇಶಿಸುವುದಾದರೆ ಅದಕ್ಕೆ ಬೆಂಬಲ ನೀಡುವುದಿಲ್ಲ. ನಮ್ಮದೇ ಆದ ರೈತ ಸಂಘವನ್ನು ಕಟ್ಟುತ್ತೇವೆ ಎಂದು ಅರುಣ್ ಮಾಚಯ್ಯ ಹೇಳಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಅವರು ಮಾತನಾಡಿ, ಬಿಜೆಪಿ ಮತ್ತು ಬಿಜೆಪಿ ಶಾಸಕರ ವೈಫಲ್ಯವನ್ನು ಮತ್ತು ಕಾಂಗ್ರೆಸ್ ಸಾಧನೆಯನ್ನು ಜನರ ಮುಂದಿಡಬೇಕೆAದು ಕರೆ ನೀಡಿದರು.

ಕಾಂಗ್ರೆಸ್ ಮುಖಂಡ ಕಳ್ಳಿಚಂಡ ನಟರಾಜ್, ಅಲ್ಪಸಂಖ್ಯಾತ ವಿಭಾಗದ ಮುಖಂಡ ಎರ್ಮು ಹಾಜಿ, ಪೊನ್ನಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್ ಹಾಗೂ ಸಭೆಯ ಅಧ್ಯಕ್ಷತೆ ವಹಿಸಿದ್ದ ಕುಟ್ಟ ವಲಯ ಕಾಂಗ್ರೆಸ್ ಅಧ್ಯಕ್ಷ ಹೆಚ್. ವೈ ರಾಮಕೃಷ್ಣ ಅವರು ಮಾತನಾಡಿದರು.

ಕಾಂಗ್ರೆಸ್ಸಿಗೆ ಸೇರ್ಪಡೆ: ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ತೊರೆದು ಹಲವರು ಕಾಂಗ್ರೆಸ್ ಸೇರಿದರು. ಈ ಸಂದರ್ಭ ಕುಟ್ಟ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಪಿ. ಸುರೇಶ್, ನಾಲ್ಕೇರಿ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ರವಿ ಪೂವಯ್ಯ ಅವರನ್ನು ಆಯ್ಕೆ ಮಾಡಿ ಅಧಿಕಾರ ಹಸ್ತಾಂತರಿಸಲಾಯಿತು.

ಯುವಕ ಸಂಘಕ್ಕೆ ಕ್ರೀಡಾ ಕಿಟ್ ವಿತರಣೆ: ಸ್ಥಳೀಯ ೨೦ ಯುವಕ ಸಂಘಕ್ಕೆ ವಾಲಿಬಾಲ್ ಕ್ರೀಡಾ ಕಿಟ್ ಅನ್ನು ಎ. ಎಸ್.ಪೊನ್ನಣ್ಣ ವಿತರಿಸಿದರು.

ಸಮಾವೇಶಕ್ಕೆ ಮೊದಲು ಕುಟ್ಟ ಬಸ್ ನಿಲ್ದಾಣದಿಂದ ಮುಖ್ಯ ಬೀದಿಯಲ್ಲಿ ಕೊಡವ ಸಮಾಜದವರೆಗೆ ಮೆರವಣಿಗೆ ನಡೆಯಿತು. ವೇದಿಕೆಯಲ್ಲಿ ಕಾಂಗ್ರೆಸ್ ಒಬಿಸಿ ಘಟಕದ ಜಿಲ್ಲಾಧ್ಯಕ್ಷ ಬಾನಂಡ ಪ್ರತ್ಯು, ಓಬಿಸಿ ಘಟಕದ ರಾಜ್ಯ ಉಪಾಧ್ಯಕ್ಷ ಕೆ. ಎಂ .ಬಾಲಕೃಷ್ಣ, ಯುವ ಘಟಕದ ಅಧ್ಯಕ್ಷ ಅಂಕಿತ್ ಪೊನ್ನಪ್ಪ, ಬ್ಲಾಕ್ ಓಬಿಸಿ ವಿಭಾಗದ ಶರತ್ ಕಾಂತ್, ತಾ.ಪಂ ಮಾಜಿ ಸದಸ್ಯ ಪಲ್ವಿನ್ ಪೂಣಚ್ಚ ,ಕೆ .ಬಾಡಗ ವಲಯ ಕಾಂಗ್ರೆಸ್ ಅಧ್ಯಕ್ಷ ಚಿಮ್ಮಣಮಾಡ ರವಿನರೇಂದ್ರ, ನಾಲ್ಕೇರಿ ವಲಯ ಅಧ್ಯಕ್ಷ ತೀತಿರ ಕಟ್ಟಿ, ಡಿಸಿಸಿ ಮಾಜಿ ಅಧ್ಯಕ್ಷ ಪಿ.ಕೆ .ಪೊನ್ನಪ್ಪ ,ಎಚ್. ಡಿ ದೊಡ್ಡಯ್ಯ, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕೋಳೇರ ಭಾರತಿ ಹಾಜರಿದ್ದರು. ಚೆಕ್ಕೇರ ಪಂಚಮ್ ಪ್ರಾರ್ಥಿಸಿ, ತೀತಿರ ಮಂದಣ್ಣ ನಿರೂಪಿಸಿ ಹೆಚ್.ವೈ. ರಾಮಕೃಷ್ಣ ವಂದಿಸಿದರು.