ಸುಂಟಿಕೊಪ್ಪ, ಫೆ. ೭: ಗ್ರಾಮ ಪಂಚಾಯಿತಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಾನೂನುಬದ್ದ ಕನಿಷ್ಟ ವೇತನವನ್ನು ನೀಡಬೇಕೆಂದು ತಾ. ೧೪ ರಂದು ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಯಲಿದೆ ಎಂದು ಮುಷ್ಕರದ ಭಿತ್ತಿಪತ್ರವನ್ನು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಭರತ್ ಕುಮಾರ್ ಬಿಡುಗಡೆಗೊಳಿಸಿ ಹೇಳಿದರು.

ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಸಿಬ್ಬಂದಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ ಅವರು, ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ ವಸೂಲಿಗಾರ, ಕ್ಲರ್ಕ್, ಡಾಟಾ ಎಂಟ್ರಿ ಆಪರೇಟರ್, ನೀರು ಗಂಟಿಗಳನ್ನು, ಸ್ವಚ್ಛತಾಕಾರರನ್ನು ಸರಕಾರಿ ನೌಕರರನ್ನಾಗಿ ಘೋಷಿಸಬೇಕು. ದಿನನಿತ್ಯದ ಬೆಲೆ ಏರಿಕೆ ಅನುಸಾರವಾಗಿ ಕನಿಷ್ಟ ವೇತನ ರೂ. ೨೫,೦೦೦ ನಿಗದಿಪಡಿಸಬೇಕು. ಮೊದಲಾದ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲಾಗುವುದೆಂದು ಅವರು ತಿಳಿಸಿದರು. ಈ ಸಂದರ್ಭ ಪಂಚಾಯಿತಿ ಪೌರಕಾರ್ಮಿಕರು ಭಿತ್ತಿಪತ್ರವನ್ನು ಅನಾವರಣಗೊಳಿಸಿ ಪ್ರದರ್ಶಿಸಿದರು.