ಮಡಿಕೇರಿ, ಫೆ. ೬: ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ೪೫೪ ಅನಧಿಕೃತ ಅಂಗಡಿಗಳಿದ್ದು, ಅವೆಲ್ಲವುಗಳಿಗೂ ನೋಟೀಸ್ ಜಾರಿ ಮಾಡಿ, ದಂಡ ವಿಧಿಸಿ ಪರವಾನಗಿ ನೀಡುವ ಕಾರ್ಯ ಕೈಗೊಳ್ಳಲಾಗಿದ್ದು, ಇದರಿಂದಾಗಿ ನಗರಸಭೆಗೆ ೬೦ ಲಕ್ಷದಷ್ಟು ಆದಾಯ ಬಂದಿದೆ ಎಂದು ನಗರಸಭಾ ಆಯುಕ್ತ ವಿಜಯ ಅವರು ಮಾಹಿತಿ ನೀಡಿದರು.

ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ೨೦೨೩-೨೪ನೇ ಸಾಲಿನಲ್ಲಿ ನಗರಸಭೆ ಆಯವ್ಯಯ ತಯಾರಿಸುವ ಸಂಬAಧ ಆದಾಯ ಮತ್ತು ಅಭಿವೃದ್ಧಿ ಬಗ್ಗೆ ಸಂಘ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು ಸಾರ್ವಜನಿಕರಿಂದ ಸಲಹೆ ಪಡೆಯುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ದೇವಜನ ಜಗದೀಶ್ ಎಂಬವರು ಅನಧಿಕೃತ ಮಳಿಗೆಗಳ ಬಗ್ಗೆ ಪ್ರಸ್ತಾಪಿಸಿದ ಸಂದರ್ಭ ಆಯುಕ್ತ ವಿಜಯ ಅವರು ಈ ಮಾಹಿತಿ ನೀಡಿದರು.

ಅಂಬೆಕಲ್ ನವೀನ್ ಮಾತನಾಡಿ, ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಪಾರ್ಕಿಂಗ್ ಸಮಸ್ಯೆ ಬಗ್ಗೆ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು ಪಾರ್ಕಿಂಗ್ ಸಂಬAಧ ಆರು ಬಾರಿ ಟೆಂಡರ್ ಕರೆದರೂ ಯಾರೂ ಕೂಡ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿಲ್ಲ. ಠೇವಣಿ ಹಾಗೂ ಶುಲ್ಕದಲ್ಲಿ ಶೇ. ೫೦ ರಷ್ಟು ಕಡಿತಗೊಳಿಸಲಾಗಿದೆಯಾದರೂ ಟೆಂಡರ್ ಪ್ರಕ್ರಿಯೆಯಲ್ಲಿ ಯಾವುದೇ ಟೆಂಡರ್‌ದಾರರು ಭಾಗವಹಿಸಿಲ್ಲ. ಮಲ್ಟಿ ಪಾರ್ಕಿಂಗ್ ವ್ಯವಸ್ಥೆಗೆ ೧೦ ಲಕ್ಷ ಹಣವನ್ನು ಮೀಸಲಿಡಲಾಗಿದೆ. ಆದರೆ ಜಾಗದ ಕೊರತೆಯಿಂದ ಸಮಸ್ಯೆ ಉಂಟಾಗಿದೆ ಎಂದರು.

(ಮೊದಲ ಪುಟದಿಂದ) ಪಾರ್ಕಿಂಗ್ ಸಂಬAಧ ಜಾಹೀರಾತಿಗಾಗಿಯೇ ಸುಮಾರು ೩ ಲಕ್ಷದಷ್ಟು ಹಣ ವ್ಯಯವಾಗಿದೆ ಎಂದು ಅಧ್ಯಕ್ಷೆ ಅನಿತಾ ಪೂವಯ್ಯ ಮಾಹಿತಿ ನೀಡಿದರು.

ಜೀವನ್ ಎಂಬವರು ಮಾತನಾಡಿ, ಎವಿ ಶಾಲೆಯಿಂದ ಮಾರ್ಕೆಟ್‌ವರೆಗೆ ಒಳ್ಳೆಯ ರಸ್ತೆ ನಿರ್ಮಾಣ ಮಾಡುವಂತೆ ಮನವಿ ಮಾಡಿದರು. ಜಾಲಿ ಮಂದಣ್ಣ ಎಂಬವರು ಮಾತನಾಡಿ, ಚರಂಡಿ ಹಾಗೂ ರಾಜಕಾಲುವೆಗಳಲ್ಲಿ ಕೊಳಚೆ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕೆಂದರು. ಬೈಶ್ರೀ ಪ್ರಕಾಶ್ ಮಾತನಾಡಿ, ಅಬ್ದುಲ್ ಕಲಾಂ ಬಡಾವಣೆಯಲ್ಲಿ ಸ್ವಚ್ಛತಾ ಕಾರ್ಯಕ್ಕೆ ಒತ್ತು ನೀಡಬೇಕೆಂದು ಕೋರಿದರು.

ವೇದಿಕೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಸವಿತಾ ರಾಕೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ್ ಸುಬ್ರಮಣಿ ಉಪಸ್ಥಿತರಿದ್ದರು.