ಕೂಡಿಗೆ, ಫೆ. ೫: ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಕುಶಾಲನಗರ ತಾಲೂಕು ವ್ಯಾಪ್ತಿಯ ೨೬ ಗಿರಿಜನ ಕುಟುಂಬದವರಿಗೆ ಈಗಾಗಲೇ ಕೊಳವೆ ಬಾವಿಯನ್ನು ಇಲಾಖೆಯ ಮುಖೇನ ಕೊರೆಸಲಾಗಿ ಅದಕ್ಕೆ ಬೇಕಾಗುವ ಪೈಪ್ ಮತ್ತು ಇತರ ಸಲಕರಣೆಗಳನ್ನು ೨೬ ಫಲಾನುಭವಿಗಳಿಗೆ ರೂ. ೬೫ ಲಕ್ಷ ಮೊತ್ತದ ಹಣದಲ್ಲಿ ನೀಡಲಾಗಿದೆ. ಇದರ ಸಮರ್ಪಕವಾದ ಬಳಕೆಯನ್ನು ಮಾಡಿಕೊಂಡು ಉತ್ತಮವಾದ ಬೇಸಾಯ ಮಾಡುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕೆಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕರೆ ನೀಡಿದರು.

ಅವರು ತೊರೆನೂರು ಗ್ರಾಮದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಗಂಗಾ ಕಲ್ಯಾಣ ಇಲಾಖೆಯ ಯೋಜನೆಯ ವತಿಯಿಂದ ಮಡಿಕೇರಿ ಕ್ಷೇತ್ರ ವ್ಯಾಪ್ತಿಯ ೨೬ ಫಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆ ಕೊಳವೆ ಬಾವಿಯ ಸವಲತ್ತುಗಳನ್ನು ವಿತರಣೆ ಮಾಡಿ ಮಾತನಾಡಿದರು. ಮುಂದುವರೆದು ಕೃಷಿ, ಹೈನುಗಾರಿಕೆಯ ಅಭಿವೃದ್ಧಿಗೆ ಪೂರಕವಾಗಿ ವಿವಿಧ ಯೋಜನೆಗಳ ಮೂಲಕ ಹಸು, ಕುರಿ ಸೇರಿದಂತೆ ವಿವಿಧ ಸವಲತ್ತುಗಳನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಗಿರಿಜನ ಅಭಿವೃದ್ಧಿಗೆ ಅನುಕೂಲ ವಾಗುವ ದೃಷ್ಟಿಯಿಂದ ಸಮುದಾಯ ಭವನ ಕಟ್ಟಡ ನಿರ್ಮಾಣಕ್ಕೆ ಅನುದಾನವನ್ನು ನೀಡಲಾಗುವುದು ಎಂದು ತಿಳಿಸಿದರು. ವೇದಿಕೆಯಲ್ಲಿ ಜಿಲ್ಲಾ ಕುರುಬ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಪ್ರಭಾಕರ್ ಮಾತನಾಡಿ, ಈಗಾಗಲೇ ಶಾಸಕರ ಅನುಮೋದನೆ ಮೇರೆಗೆ ಗಿರಿಜನ ಕುಟುಂಬದವರಿಗೆ ಎಲ್ಲಾ ಸೌಲಭ್ಯಗಳು ದೊರೆಯುತ್ತಿವೆ. ಮುಂದಿನ ದಿನಗಳಲ್ಲಿ ರಾಜ್ಯ ಕುರಿ ಮಂಡಳಿಯ ನಿಗಮದ ಅಡಿಯಲ್ಲಿ ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಕುರಿ ಮತ್ತು ಉಣ್ಣೆ ಸಹಕಾರ ಸಂಘವನ್ನು ತೆರೆಯುವ ಎಲ್ಲಾ ಸಿದ್ಧತೆಗಳು ನಡೆದಿವೆ.

ಜಿಲ್ಲೆಯ ಎಲ್ಲಾ ಗಿರಿಜನರ ಸಹಕಾರದೊಂದಿಗೆ ಸಹಕಾರ ಸಂಘದ ಮೂಲಕ ಸಾಲ ಸೌಲಭ್ಯಗಳನ್ನು ನೀಡು ವುದರ ಮೂಲಕ ಆರ್ಥಿಕ ಮಟ್ಟವನ್ನು ಸುಧಾರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತೊರೆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪ ಮಹೇಶ್ ವಹಿಸಿದ್ದರು. ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬೀಬಿಯಣ್ಣ, ಸದಸ್ಯರಾದ ದೇವರಾಜ್, ಶಿವಕುಮಾರ್, ಪ್ರಕಾಶ್, ಯಶೋದ, ಬಸವನಹಳ್ಳಿ ಸಹಕಾರ ಸಂಘದ ನಿರ್ದೇಶಕ ಉದಯ ಕುಮಾರ್, ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮ ಅಧಿಕಾರಿ ಚಂದ್ರಶೇಖರ್ ಸೇರಿದಂತೆ ಫಲಾನುಭವಿಗಳು ಮತ್ತು ಗ್ರಾಮಸ್ಥರು ಹಾಜರಿದ್ದರು.